ಬೇಗುಸರಾಯ್ (ಬಿಹಾರ): ಮದ್ಯ ಕಳ್ಳ ಸಾಗಾಟ ಮಾಡುತ್ತಿದ್ದ ವಾಹನವೊಂದು ಮಂಗಳವಾರ ಪೊಲೀಸ್ ತಂಡದ ಮೇಲೆ ದಾಳಿ ಮಾಡಿದ್ದು, ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಸಾವನ್ನಪ್ಪಿದ್ದು, ಗೃಹರಕ್ಷಕ ದಳದ ಜವಾನನೊಬ್ಬ ಗಂಭೀರವಾಗಿ ಗಾಯಗೊಂಡಿರುವ ಘಟನೆ ಬಿಹಾರದ ಬೇಗುಸರಾಯ್ನಲ್ಲಿ ನಡೆದಿದೆ.
ಪೊಲೀಸ್ ಅಧಿಕಾರಿಗಳ ಪ್ರಕಾರ, ಜಿಲ್ಲೆಯ ನವೋ ಕೋಠಿ ಪೊಲೀಸ್ ಠಾಣಾ ವ್ಯಾಪ್ತಿಯ ಛಟೌನಾ ಸೇತುವೆ ಬಳಿ ಘಟನೆ ನಡೆದಿದೆ. ಕಾರಿನಲ್ಲಿ ಮದ್ಯ ಕಳ್ಳಸಾಗಣೆ ಮಾಡುತ್ತಿರುವ ಬಗ್ಗೆ ರಹಸ್ಯ ಮಾಹಿತಿ ಆಧರಿಸಿ, ಎಎಸ್ಐ ಖಾಮಸ್ ಚೌಧರಿ ಅವರ ನೇತೃತ್ವದಲ್ಲಿ ಐವರು ಪೊಲೀಸರ ತಂಡ ವಾಹನಗಳ ತಪಾಸಣೆ ನಡೆಸುತ್ತಿದ್ದರು. ಈ ವೇಳೆ, ವೇಗವಾಗಿ ಬಂದ ಮದ್ಯ ಸಾಗಿಸುತ್ತಿದ್ದ ಆಲ್ಟೋ ಕಾರು ಎಎಸ್ಐ ಹಾಗೂ ಗೃಹರಕ್ಷಕ ದಳದ ಜವಾನನಿಗೆ ಡಿಕ್ಕಿ ಹೊಡೆದು ವೇಗವಾಗಿ ಎಸ್ಕೇಪ್ ಆಗಿದೆ.
ರಾತ್ರಿ 12 ಗಂಟೆಯ ಸುಮಾರಿಗೆ ಛಟೌನಾ ಬುಧಿ ಗಂಡಕ್ ನದಿ ಸೇತುವೆ ಬಳಿ ಮದ್ಯ ಕಳ್ಳ ಸಾಗಣೆ ಮಾಡುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಎಎಸ್ಐ ಖಾಮಸ್ ಚೌಧರಿ ನೇತೃತ್ವದಲ್ಲಿ ತಂಡವನ್ನು ರಚಿಸಿ, ಸ್ಥಳಕ್ಕೆ ಕಳುಹಿಸಲಾಗಿತ್ತು. ಇನ್ಸ್ಪೆಕ್ಟರ್ ಖಾಮಸ್ ಚೌಧರಿ ತಮ್ಮ ತಂಡದೊಂದಿಗೆ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದರು.
ತಪಾಸಣೆ ವೇಳೆ ಗೃಹ ರಕ್ಷಕ ದಳದ ಸಿಬ್ಬಂದಿ ಎದುರಿನಿಂದ ಬರುತ್ತಿದ್ದ ಆಲ್ಟೋ ಕಾರನ್ನು ನಿಲ್ಲಿಸುವಂತೆ ಸೂಚಿಸಿದರು. ಆದರೆ, ಪೊಲೀಸರನ್ನು ಕಂಡ ಕಾರು ಚಾಲಕ ಕಾರಿನ ವೇಗವನ್ನು ಹೆಚ್ಚಿಸಿ, ಪೊಲೀಸರಿಗೇ ಡಿಕ್ಕಿ ಹೊಡೆದು ಮುಂದೆ ಸಾಗಿದ್ದಾನೆ. ಡಿಕ್ಕಿ ಹೊಡೆದ ಪರಿಣಾಮ ಎಎಸ್ಐ ಚೌಧರಿ ಸ್ಥಳದಲ್ಲೇ ಮೃತಪಟ್ಟಿದ್ದು, ಬಾಳಾಸಾಹೇಬ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಬಾಳಾಸಾಹೇಬ್ ಯಾದವ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣದ ತನಿಖೆಗಾಗಿ ವಿಶೇಷ ತಂಡವನ್ನು ರಚಿಸಲಾಗಿದ್ದು, ಶೋಧ ಕಾರ್ಯ ನಡೆಯುತ್ತಿದೆ.
ಗಾಯಗೊಂಡಿರುವ ಗೃಹ ರಕ್ಷಕ ದಳದ ಜವಾನ ಬಾಳಾ ಸಾಹೇಬ್ ಯಾದವ್, "ಮಂಗಳವಾರ ರಾತ್ರಿ 12 ಗಂಟೆಗೆ ನಾನು ಹಾಗೂ ಇತರ 3 ಗೃಹ ರಕ್ಷಕ ದಳದ ಸಿಬ್ಬಂದಿಯೊಂದಿಗೆ ವಾಹನಗಳ ತಪಾಸಣೆ ನಡೆಸುತ್ತಿದ್ದೆವು. ಆಗ ಆಲ್ಟೋ ಕಾರು ನಮಗೆ ಹಿಂದಿನಿಂದ ಡಿಕ್ಕಿ ಹೊಡೆದು, ಎಸ್ಕೇಪ್ ಆಗಿದೆ. ಘಟನೆಯಲ್ಲಿ ಎಎಸ್ಐ ಸಾವನ್ನಪ್ಪಿದ್ದಾರೆ" ಎಂದು ತಿಳಿಸಿದರು.
ಘಟನೆ ಬಗ್ಗೆ ಬೇಗುಸರಾಯ್ ಎಸ್ಪಿ ಯೋಗೇಂದ್ರ ಕುಮಾರ್ ಮಾಹಿತಿ ನೀಡಿದ್ದು, "ನವ್ ಕೋಠಿ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎಎಸ್ಐ ಖಾಮಸ್ ಚೌಧರಿ ಅವರು ಕರ್ತವ್ಯದ ವೇಳೆ ಹುತಾತ್ಮರಾಗಿದರು. ರಾತ್ರಿ ಯಾರೋ ಆಲ್ಟೋ ಕಾರಿನಲ್ಲಿ ಮದ್ಯ ಸಾಗಿಸುತ್ತಿರುವ ಬಗ್ಗೆ ಠಾಣಾ ಮುಖ್ಯಸ್ಥರಿಗೆ ಮಾಹಿತಿ ನೀಡಿದ್ದರು. ಮಾಹಿತಿ ಆಧರಿಸಿ ಕಾರ್ಯಾಚರಣೆಗೆ ಖಮಾಸ್ ಚೌಧರಿ ತಂಡ ಸ್ಥಳಕ್ಕೆ ತೆರಳಿದ್ದಾರೆ. ವಾಹನಗಳನ್ನು ತಪಾಸಣೆ ಮಾಡುತ್ತಿದ್ದ ವೇಳೆ ಆಲ್ಟೋ ಕಾರೊಂದನ್ನು ಸಿಬ್ಬಂದಿ ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ಪೊಲೀಸರನ್ನು ನೋಡಿದ ಕೂಡಲೇ ಕಾರಿನ ಚಾಲಕ ತನ್ನ ವೇಗವನ್ನು ಹೆಚ್ಚಿ, ಖಮಾಸ್ ಚೌಧರಿ ಹಾಗೂ ಜವಾನನೊಬ್ಬನಿಗೆ ಡಿಕ್ಕಿ ಹೊಡೆದಿದ್ದಾನೆ. ಚೌಧರಿ ಕಲ್ಲೊಂದರ ಮೇಲೆ ಬಿದ್ದಿದ್ದು, ಕಲ್ಲು ತಲೆಗೆ ಬಲವಾಗಿ ತಾಗಿದ ಪರಿಣಾಮ ಅವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ." ಎಂದು ತಿಳಿಸಿದರು.
ಇದನ್ನೂ ಓದಿ: ವಿಮಾನ ನಿಲ್ದಾಣ ರಸ್ತೆಯಲ್ಲಿ ಸರಣಿ ಅಪಘಾತ: 9 ಕಾರುಗಳ ಜಖಂ