ನವದೆಹಲಿ: ಮತದಾರರ ಗುರುತಿನ ಚೀಟಿ ಆಧಾರ್‌ಗೆ ಜೋಡಣೆಯಿಂದ ಒಂದೇ ವ್ಯಕ್ತಿ ವಿವಿಧ ಸ್ಥಳಗಳಲ್ಲಿ ಬಹು ನೋಂದಣಿ ಮಾಡಿಕೊಂಡಿರುವ ಪ್ರಮುಖ ಸಮಸ್ಯೆಯನ್ನು ಇದು ಪರಿಹರಿಸುತ್ತದೆ. ಮತದಾರರ ಪಟ್ಟಿಯಲ್ಲಿ ಹೆಚ್ಚಿನ ಪಾರದರ್ಶಕತೆ ತರಲು ಇದು ಸಹಕಾರಿ ಎಂದು ಕೇಂದ್ರ ಸರ್ಕಾರ ಹೇಳಿದೆ.
ಮತದಾರರ ಗುರುತಿನ ಚೀಟಿಯನ್ನು ಆಧಾರ್‌ಗೆ ಜೋಡಣೆ ಮೂಲಕ ಚುನಾವಣಾ ಸುಧಾರಣೆಗಳನ್ನು ತರಲು 'ಚುನಾವಣಾ ಕಾನೂನುಗಳು (ತಿದ್ದುಪಡಿ) 2021 ಮಸೂದೆಯನ್ನು ಲೋಕಸಭೆಯಲ್ಲಿ ಒಂದು ದಿನದ ಸಂಕ್ಷಿಪ್ತ ಚರ್ಚೆಯ ನಂತರ ಸೋಮವಾರ ಅಂಗೀಕರಿಸಲಾಗಿದೆ. ಆದರೆ ಇದಕ್ಕೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು.
ಬಹುಕಾಲದಿಂದ ಚರ್ಚೆಯಾಗುತ್ತಿರುವ ಚುನಾವಣಾ ಸುಧಾರಣೆಗಳು ಈ ಮಸೂದೆಯಲ್ಲಿ ಒಳಗೊಂಡಿದೆ. ಮತದಾರರ ಪಟ್ಟಿಯಲ್ಲಿ ಹೆಸರು ನೋಂದಣಿಗಾಗಿ ಅರ್ಹ ವ್ಯಕ್ತಿ ಅರ್ಜಿಯ ಆಧಾರದ ಮೇಲೆ ನೋಂದಣಿ ಮಾಡಲಾಗುತ್ತಿತ್ತು. ಆದರೆ ಹೊಸ ಕಾಯ್ದೆ ಜಾರಿಯಾದರೆ ಅರ್ಜಿದಾರರು ಗುರುತಿನ ಚೀಟಿಯ ಉದ್ದೇಶಕ್ಕಾಗಿ ಅರ್ಜಿಯೊಂದಿಗೆ ಆಧಾರ್ ಸಂಖ್ಯೆಯನ್ನು ಸ್ವಯಂಪ್ರೇರಣೆಯಿಂದ ನೀಡಬೇಕಿರುವ ನಿಬಂಧನೆಯನ್ನು ಇದರಲ್ಲಿ ಸೇರಿಸಲಾಗಿದೆ. ಆಧಾರ್ ಸಂಖ್ಯೆ ನೀಡಿಲ್ಲ ಎಂಬ ಕಾರಣಕ್ಕೆ ಯಾವುದೇ ಅರ್ಜಿಯನ್ನು ತಿರಸ್ಕರಿಸಲಾಗುವುದಿಲ್ಲ ಎಂದು ಮೂಲಗಳು ತಿಳಿಸಿವೆ.
ಮತದಾರರು ಆಗಾಗ್ಗೆ ವಾಸಸ್ಥಳವನ್ನು ಬದಲಾಯಿಸುವುದು ಹಾಗೂ ಹಿಂದಿನ ದಾಖಲಾತಿಯನ್ನು ಅಳಿಸದೆ ಹೊಸ ಸ್ಥಳದಲ್ಲಿ ನೋಂದಾಯಿಸಿಕೊಳ್ಳುವುದನ್ನು ಇದು ತಪ್ಪಿಸುತ್ತದೆ. ಒಂದಕ್ಕಿಂತ ಹೆಚ್ಚು ಮತದಾರರ ಪಟ್ಟಿಯಲ್ಲಿ ಅಥವಾ ಒಂದೇ ಮತದಾರರ ಪಟ್ಟಿಯಲ್ಲಿ ಒಂದಕ್ಕಿಂತ ಹೆಚ್ಚು ಬಾರಿ ಹೆಸರು ಕಾಣಿಸಿಕೊಳ್ಳುವ ಸಾಧ್ಯತೆಯನ್ನು ತೆಗೆದುಹಾಕಬಹುದು.
ಒಮ್ಮೆ ಆಧಾರ್ ಜೋಡಣೆಯನ್ನು ಸಾಧಿಸಿದ ನಂತರ, ಮತದಾರರ ಪಟ್ಟಿಯ ದತ್ತಾಂಶ ವ್ಯವಸ್ಥೆಯು ವ್ಯಕ್ತಿಯು ಹೊಸ ನೋಂದಣಿಗೆ ಅರ್ಜಿ ಸಲ್ಲಿಸಿದಾಗಲೆಲ್ಲಾ ಹಿಂದಿನ ನೋಂದಣಿ (ಗಳ) ಅಸ್ತಿತ್ವವನ್ನು ತಕ್ಷಣವೇ ಎಚ್ಚರಿಸುತ್ತದೆ ಎಂದು ತಿಳಿಸಿವೆ.
ಇದನ್ನೂ ಓದಿ: ಮತದಾರರ ಚೀಟಿ ಆಧಾರ್ ಸಂಖ್ಯೆಗೆ ಲಿಂಕ್: ವಿಪಕ್ಷಗಳ ಗದ್ದಲದ ನಡುವೆಯೇ ಲೋಕಸಭೆಯಲ್ಲಿಂದು ಮಸೂದೆ ಅಂಗೀಕಾರ