ದೋಡಾ (ಜಮ್ಮು ಮತ್ತು ಕಾಶ್ಮೀರ): ಕಾಂಗ್ರೆಸ್ ಬಿಟ್ಟು ಹೊರನಡೆದ ಎರಡು ತಿಂಗಳ ನಂತರ, ಕಾಂಗ್ರೆಸ್‌ನ ಮಾಜಿ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಮತ್ತೆ ಮಾತೃ ಪಕ್ಷದ ಪರವಾಗಿ ಹೇಳಿಕೆ ನೀಡಿದ್ದು ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ. ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣೆಗಳಲ್ಲಿ ಕಾಂಗ್ರೆಸ್ ಜಯ ಸಾಧಿಸಲಿ ಎಂದು ನಾನು ಈಗಲೂ ಬಯಸುತ್ತೇನೆ ಎಂದು ಆಜಾದ್ ಹೇಳಿದ್ದಾರೆ.
ಇದೇ ಸಮಯದಲ್ಲಿ ಆಪ್ ವಿರುದ್ಧ ವಾಗ್ದಾಳಿ ನಡೆಸಿರುವ ಅವರು, ಆಪ್ ಪಂಜಾಬ್ನಲ್ಲಿ ವಿಫಲವಾಗಿದೆ. ಈ ರಾಜ್ಯದಲ್ಲಿ ಆಪ್ ಏನೂ ಮಾಡಲಾರದು. ಪಂಜಾಬ್ ಜನತೆ ಮತ್ತೊಮ್ಮೆ ಆಪ್ಗೆ ಮತ ನೀಡಲ್ಲ ಎಂದು ಹೇಳಿದ್ದಾರೆ.
ದೋಡಾ ಜಿಲ್ಲೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಆಜಾದ್, ಕಾಂಗ್ರೆಸ್‌ನ ಜಾತ್ಯತೀತತೆಯನ್ನು ಹೊಗಳಿದರು. ಪಕ್ಷದೊಳಗಿನ ದುರ್ಬಲ ವ್ಯವಸ್ಥೆಯ ಬಗ್ಗೆ ಮಾತ್ರ ನನ್ನ ವಿರೋಧವಿದೆ. ಆದರೆ ಕಾಂಗ್ರೆಸ್‌ನ ಜಾತ್ಯತೀತತೆಯ ಬಗ್ಗೆ ನಾನೆಂದೂ ವಿರೋಧಿಯಲ್ಲ ಎಂದು ತಿಳಿಸಿದರು.
ಕಾಂಗ್ರೆಸ್ ಮಾತ್ರ ಪಂಜಾಬ್ ಅನ್ನು ಸಮರ್ಥವಾಗಿ ನಡೆಸಬಲ್ಲದು. ಕಾಂಗ್ರೆಸ್ ಗುಜರಾತ್ ಮತ್ತು ಹಿಮಾಚಲದಲ್ಲಿ ಬಿಜೆಪಿಗೆ ಸವಾಲು ಹಾಕುವ ಏಕೈಕ ಪಕ್ಷವಾಗಿದೆ. ಎಎಪಿ ಕೇವಲ ದೆಹಲಿಯಲ್ಲಿ ಅಸ್ತಿತ್ವದಲ್ಲಿದೆ. ಕಾಂಗ್ರೆಸ್ ಎಲ್ಲರನ್ನೂ ಒಳಗೊಳ್ಳುವ ನೀತಿಯನ್ನು ಹೊಂದಿದೆ ಎಂದು ಅವರು ಹೇಳಿದರು.
ಈ ವರ್ಷದ ಆಗಸ್ಟ್ 26 ರಂದು ಆಜಾದ್, ಸೋನಿಯಾ ಗಾಂಧಿಯವರಿಗೆ ರಾಜೀನಾಮೆ ಕಳುಹಿಸಿದ ನಂತರ ಕಾಂಗ್ರೆಸ್‌ನೊಂದಿಗಿನ ತಮ್ಮ ದಶಕಗಳ ಒಡನಾಟ ಕೊನೆಗೊಳಿಸಿದ್ದರು. ನಂತರ ಆಜಾದ್ ತಮ್ಮದೇ ಆದ ಡೆಮಾಕ್ರಟಿಕ್ ಆಜಾದ್ ಪಾರ್ಟಿ ಸ್ಥಾಪಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ಮೋದಿ ಒರಟು ವ್ಯಕ್ತಿ ಅಂದ್ಕೊಂಡಿದ್ದೆ, ಆದ್ರೆ ಅವ್ರಿಗೆ ಮಾನವೀಯತೆ ಇದೆ: ಗುಲಾಂ ನಬಿ ಆಜಾದ್