ನವದೆಹಲಿ: ದೇಶಾದ್ಯಂತ ಎರಡನೇ ಹಂತದ ಕೋವಿಡ್ ಅಲೆ ಜೋರಾಗಿದ್ದು, ಪ್ರತಿದಿನ 4 ಲಕ್ಷಕ್ಕೂ ಅಧಿಕ ಕೋವಿಡ್ ಸೋಂಕಿತರು ಪತ್ತೆಯಾಗುತ್ತಿದ್ದಾರೆ. ಜೊತೆಗೆ ಸಾವಿರಾರು ಜನರು ಹೆಮ್ಮಾರಿಗೆ ಬಲಿಯಾಗುತ್ತಿದ್ದಾರೆ. ಇದರ ಬೆನ್ನಲ್ಲೇ ರಾಜ್ಯಸಭೆ ಪ್ರತಿಪಕ್ಷ ನಾಯಕ, ಕಾಂಗ್ರೆಸ್ ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಅವರು ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.
ದೇಶದಲ್ಲಿ ತಲೆದೋರಿರುವ ಕೋವಿಡ್ ಎದುರಿಸಲು ಖರ್ಗೆ ಆರು ಸಲಹೆ ನೀಡಿ ಇಂದು ಬೆಳಗ್ಗೆ ಪ್ರಧಾನಿಗೆ ಪತ್ರ ರವಾನಿಸಿದ್ದಾರೆ. ಕೋವಿಡ್ ವಿರುದ್ಧದ ಹೋರಾಟದಲ್ಲಿ ಸಾಮೂಹಿಕ ಮತ್ತು ಒಮ್ಮತದ ವಿಧಾನ ಅಳವಡಿಸಿಕೊಳ್ಳುವಂತೆ ಒತ್ತಾಯಿಸಿದ್ದಾರೆ.
ಸಾಂಕ್ರಾಮಿಕ ರೋಗ ನಿಭಾಯಿಸಲು ಸಮಗ್ರ ನೀಲನಕ್ಷೆಯನ್ನು ಒಟ್ಟಾಗಿ ರೂಪಿಸಬೇಕಾಗಿದ್ದು, ಎಲ್ಲ ಭಾರತೀಯರು ಕೋವಿಡ್ ಚುಚ್ಚುಮದ್ದು ಪಡೆದುಕೊಳ್ಳಲು ಯಾವ ಕ್ರಮ ಕೈಗೊಂಡಿದ್ದಾರೆ ಎಂಬುದನ್ನ ಮನದಟ್ಟು ಮಾಡಿಕೊಳ್ಳಬೇಕಾಗಿದೆ ಎಂದಿದ್ದಾರೆ.
ಕೋವಿಡ್ ಲಸಿಕೆಗಾಗಿ ಕೇಂದ್ರ ಸರ್ಕಾರ ಬಜೆಟ್ನಲ್ಲಿ ನಿಗದಿಪಡಿಸಿರುವ 35,000 ಕೋಟಿ ರೂ. ಬಳಸಿಕೊಳ್ಳಲು ಸರ್ವಪಕ್ಷ ಸಭೆ ಕರೆಯುವಂತೆ ಖರ್ಗೆ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ಕೋವಿಡ್ ಲಸಿಕೆ ಉತ್ಪಾದನೆ ಹೆಚ್ಚಿಸಲು ಹಾಗೂ ಕಡ್ಡಾಯ ಪರವಾನಿಗೆ ಹತೋಟಿಗೆ ತರಲು ವೈದ್ಯಕೀಯ ಉಪಕರಣಗಳ ಮೇಲಿನ ತೆರಿಗೆ ಮನ್ನಾ ಮಾಡುವಂತೆ ಆಗ್ರಹಿಸಿದ್ದಾರೆ.
ದೇಶದಲ್ಲಿನ ನಿರುದ್ಯೊಗಿ ವಲಸಿಗರಿಗೆ ಸಹಾಯ ಮಾಡಲು ವಿದೇಶಿ ಪರಿಹಾರ ಸಾಮಗ್ರಿ ವಿತರಣೆ ತ್ವರಿತಗೊಳಿಸುವಂತೆ ಮನವಿ ಮಾಡಿದ್ದು, ಎಂಎನ್ಆರ್ಇಜಿಎ(ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ) ಅಡಿಯಲ್ಲಿ ಕನಿಷ್ಠ ವೇತನ ಮತ್ತು ಸಂಬಳ ಹೆಚ್ಚಳ ಮಾಡುವಂತೆ ಒತ್ತಾಯಿಸಿದ್ದಾರೆ.
ದೇಶದಲ್ಲಿನ ಕೋವಿಡ್ ಸೋಂಕು ಹೆಚ್ಚಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಂಸದ ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.
ಇದನ್ನೂ ಓದಿ: ಪಂಚಾಯಿತಿಗಳಿಗೆ 8,923.8 ಕೋಟಿ ರೂ. ಬಿಡುಗಡೆ; ಕರ್ನಾಟಕದ ಪಾಲೆಷ್ಟು..?
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಪ್ರಧಾನಿಗೆ ಪತ್ರ ಬರೆದಿದ್ದು, ರಾಜ್ಯದಲ್ಲಿ ಉಂಟಾಗಿರುವ ಆಮ್ಲಜನಕ ಪೂರೈಕೆ ಬಿಕ್ಕಟಿಗೆ ತಕ್ಷಣವೇ ಪರಿಹಾರ ನೀಡುವಂತೆ ಕೇಳಿಕೊಂಡಿದ್ದರು. ಜತೆಗೆ ದೇಶದಲ್ಲಿನ ಎಲ್ಲರಿಗೂ ಉಚಿತವಾಗಿ ಕೋವಿಡ್ ವ್ಯಾಕ್ಸಿನ್ ನೀಡುವಂತೆ ಮನವಿ ಮಾಡಿದ್ದರು.
ದೇಶದಲ್ಲಿ ಕಳೆದ ಕೆಲ ದಿನಗಳಿಂದ ಪ್ರತಿ ದಿನ ನಾಲ್ಕು ಲಕ್ಷಕ್ಕೂ ಅಧಿಕ ಕೋವಿಡ್ ಪಾಸಿಟಿವ್ ಪ್ರಕರಣಗಳು ದಾಖಲಾಗುತ್ತಿದ್ದು, ಸದ್ಯ 36.5 ಲಕ್ಷಕ್ಕಿಂತಲೂ ಅಧಿಕ ಸಕ್ರಿಯ ಪ್ರಕರಣಗಳಿವೆ.