ಋಷಿಕೇಶ(ಉತ್ತರಾಖಂಡ): ರಿಸೆಪ್ಷನಿಸ್ಟ್ ಅಂಕಿತಾ ಭಂಡಾರಿ ಹತ್ಯೆ ಪ್ರಕರಣದ ಆರೋಪಿಗಳ ಜಾಮೀನಿಗೆ ಅರ್ಜಿ ಸಲ್ಲಿಸಿದ್ದ ವಕೀಲರು ಇದೀಗ ಪ್ರಕರಣದ ವಿರುದ್ಧ ಹೋರಾಡಲು ನಿರಾಕರಿಸಿದ್ದಾರೆ. ಕೋಟ್‌ದ್ವಾರದ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಪ್ರಥಮ ದರ್ಜೆ ನ್ಯಾಯಾಲಯದಲ್ಲಿ ವಕೀಲ ಜಿತೇಂದ್ರ ರಾವತ್ ಆರೋಪಿಗಳ ಪರವಾಗಿ ಜಾಮೀನು ಅರ್ಜಿ ಸಲ್ಲಿಸಿದ್ದರು. ಇದೀಗ ಪ್ರಕರಣದ ಸೂಕ್ಷ್ಮತೆ ಪರಿಗಣಿಸಿ ಆರೋಪಿಗಳ ಜಾಮೀನು ಅರ್ಜಿಯನ್ನು ಹಿಂಪಡೆದಿರುವುದಾಗಿ ಅವರು ತಿಳಿಸಿದ್ದಾರೆ.
ದೇವಭೂಮಿಯೆಂದು ಹೆಸರಾದ ಉತ್ತರಾಖಂಡದಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಅತ್ಯಂತ ದುರದೃಷ್ಟಕರ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಬೇಕು, ಇದು ಇಡೀ ದೇಶಕ್ಕೆ ಉದಾಹರಣೆಯಾಗಬೇಕು ಎಂದು ವಕೀಲರು ಇದೇ ವೇಳೆ ಹೇಳಿದ್ದಾರೆ.
ಜೊತೆಗೆ ಅಂಕಿತಾ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪರ ವಾದಿಸಲು ಹೊರಗಿನಿಂದ ಯಾರಾದರೂ ವಕೀಲರು ಬಂದರೆ, ಅವರನ್ನು ವಕೀಲರ ಸಂಘ ಸಂಪೂರ್ಣವಾಗಿ ವಿರೋಧಿಸುತ್ತದೆ. ಅಂಕಿತಾ ನಮ್ಮೆಲ್ಲರ ಮಗಳಾಗಿದ್ದು, ಇದು ಸೂಕ್ಷ್ಮ ವಿಷಯವಾಗಿರುವುದರಿಂದ ಅಂಕಿತಾ ಪರವಾಗಿ ನಾನೇ ನ್ಯಾಯಾಲಯದಲ್ಲಿ ವಾದ ಮಂಡಿಸುತ್ತೇನೆ ಎಂದು ವಕೀಲರ ಸಂಘ ಕೋಟ್‌ದ್ವಾರದ ಅಧ್ಯಕ್ಷ ಅಜಯ್ ಪಂತ್ ಹೇಳಿದ್ದಾರೆ.
ಇದನ್ನೂ ಓದಿ : ಉತ್ತರಾಖಂಡದ ರಿಸೆಪ್ಷನಿಸ್ಟ್ ಅಂಕಿತಾ ಕೊಲೆ ಪ್ರಕರಣ: ಕಂದಾಯ ಅಧಿಕಾರಿ ಅಮಾನತು