ಹಥ್ರಾಸ್(ಉತ್ತರಪ್ರದೇಶ) : ಹಥ್ರಾಸ್ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಮೃತ ಸಂತ್ರಸ್ತೆ ಕುಟುಂಬದ ಪರ ವಕೀಲೆಯಾಗಿರುವ ಸೀಮಾ ಕುಶ್ವಾಹ ಅವರು, 'ನಾನು ಸಾಯೋದನ್ನ ನೋಡಲು ಕಾಯುತ್ತಿದ್ದೀರಾ?' ಎಂದು ಪ್ರಧಾನಿ ನರೇಂದ್ರ ಮೋದಿಯನ್ನು ಪ್ರಶ್ನಿಸಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಸೀಮಾ ಕುಶ್ವಾಹ, ಕೇವಲ ಹಥ್ರಾಸ್ ನ್ಯಾಯಾಲಯದಿಂದ ಮಾತ್ರ ನನಗೆ ಭದ್ರತೆ ದೊರೆತಿದೆ. ಎಷ್ಟು ಬಾರಿ ವಿನಂತಿಸಿದರೂ ನನಗೆ ಕೇಂದ್ರದ ಮೋದಿ ಸರ್ಕಾರವಾಗಲಿ, ಉತ್ತರಪ್ರದೇಶದ ಯೋಗಿ ಆದಿತ್ಯನಾಥ್ ಸರ್ಕಾರವಾಗಲಿ ಭದ್ರತೆ ಒದಗಿಸಿಲ್ಲ. ನನ್ನ ಸಾವು ಕಂಡ ಬಳಿಕ ತನಿಖೆ ನಡೆಸಲು ಕಾಯುತ್ತಿದ್ದೀರಾ? ಎಂದು ಕೇಳಿದ್ದಾರೆ.
ಕೆಲವು ವಕೀಲರು ನನ್ನನ್ನು ಹಿಂಬಾಲಿಸುತ್ತಿದ್ದಾರೆ. 2021ರ ಮಾರ್ಚ್ 5ರಂದು ನಾನು ಹಥ್ರಾಸ್ ನ್ಯಾಯಾಲಯಕ್ಕೆ ಭೇಟಿ ನೀಡಿದಾಗ ಪ್ರಕರಣದ ಸಂಬಂಧ ಕೆಲ ದಾಖಲೆಗಳನ್ನು ಸಲ್ಲಿಸಲು ನನಗೆ ಅವಕಾಶ ನೀಡಲಿಲ್ಲ. ಆ ಬಳಿಕ ನಾನು ಪ್ರಕರಣದ ವಿಚಾರಣೆಯನ್ನು ಹಥ್ರಾಸ್ ಕೋರ್ಟ್ನಿಂದ ಬೇರೆಡೆಗೆ ವರ್ಗಾಯಿಸಲು ಮನವಿ ಮಾಡಿದೆ. ಆದರೆ, ಕೋರ್ಟ್ ಇದಕ್ಕೆ ಸಮ್ಮತಿ ನೀಡಲಿಲ್ಲ ಎಂದು ವಕೀಲೆ ಹೇಳಿದ್ದಾರೆ.
ಹಥ್ರಾಸ್ ರೇಪ್ ಕೇಸ್
2020ರ ಸೆಪ್ಟೆಂಬರ್ 14ರಂದು ಉತ್ತರಪ್ರದೇಶದ ಹಥ್ರಾಸ್‌ನಲ್ಲಿ 19 ವರ್ಷದ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಕಾಮುಕರು, ಬರ್ಬರವಾಗಿ ಹಲ್ಲೆ ನಡೆಸಿದ್ದರು ಎಂದು ಆರೋಪಿಸಲಾಗಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಸಂತ್ರಸ್ತೆ ಸೆ.29ರಂದು ದೆಹಲಿಯ ಸಫ್ತರ್ಜಂಗ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಳು.
ನಿರ್ಭಯಾ ಲಾಯರ್
2012ರ ನಿರ್ಭಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನಿರ್ಭಯಾ ಪರ ವಕೀಲೆಯಾಗಿ, ನಾಲ್ವರು ಅಪರಾಧಿಗಳನ್ನು ಗಲ್ಲಿಗೇರಿಸಲು ಹೋರಾಡಿ ಗೆದ್ದಿದ್ದ ಸೀಮಾ ಕುಶ್ವಾಹ ಅವರು ಹಥ್ರಾಸ್ ಪ್ರಕರಣದ ಜವಾಬ್ದಾರಿಯನ್ನೂ ಹೊತ್ತು ಮೃತ ಸಂತ್ರಸ್ತೆ ಕುಟುಂಬದ ಪರ ವಕೀಲೆಯಾಗಿದ್ದಾರೆ.
ಈ ಪ್ರಕರಣದಲ್ಲಿ ಬಂಧಿತರಾದ ನಾಲ್ವರು ಆರೋಪಿಗಳಾದ ಸಂದೀಪ್, ರವಿ, ರಾಮು ಮತ್ತು ಲುವ್ ಕುಶ್ ಸದ್ಯ ಅಲಿಗಢ್ ಜೈಲಿನಲ್ಲಿದ್ದಾರೆ. ಪ್ರಕರಣ ಸಂಬಂಧ ನಿನ್ನೆ ವಿಚಾರಣೆ ನಡೆಸಿದ್ದ ಹಥ್ರಾಸ್ ನ್ಯಾಯಾಲಯ ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 23ಕ್ಕೆ ಮುಂದೂಡಿದೆ.