ಬಿಜೆಪಿ ನಾಯಕಿ, ಸಾಮಾಜಿಕ ಜಾಲತಾಣದ ತಾರೆ, ನಟಿ ಸೋನಾಲಿ ಫೋಗಟ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋವಾ ಪೊಲೀಸರ ತನಿಖೆ ತೀವ್ರಗೊಂಡಿದೆ.
ಈಗಾಗಲೇ ಸೋನಾಲಿ ಫೋಗಟ್ ಸಾವಿಗೆ ಮಾದಕ ದ್ರವ್ಯ ಸೇವನೆಯೇ ಕಾರಣ ಎಂದು ಗೋವಾ ಪೊಲೀಸರು ತಿಳಿಸಿದ್ದಾರೆ. ಮೃತದೇಹದ ಮೇಲೆ ಅನೇಕ ಗಾಯದ ಗುರುತುಗಳಿರುವುದು ಮರಣೋತ್ತರ ಪರೀಕ್ಷೆಯಲ್ಲಿ ಬಯಲಾಗಿತ್ತು. ಹೀಗಾಗಿ ಪೊಲೀಸರು ಇದೊಂದು ಕೊಲೆ ಎಂಬ ತೀರ್ಮಾನಕ್ಕೆ ಬಂದು ಮೊದಲು ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿ ಅವರನ್ನು ಬಂಧಿಸಿದರು. ನಂತರ ಕರ್ಲಿಸ್ ಕ್ಲಬ್ ಮಾಲೀಕ ಎಡ್ವಿನ್ ನೂನಿಸ್ ಮತ್ತು ಡ್ರಗ್ ಪೆಡ್ಲರ್ ದತ್ತಪ್ರಸಾದ್ ಗಾಂವ್ಕರ್ ಸೇರಿ ಈವರೆಗೆ ಒಟ್ಟು ಐದು ಆರೋಪಿಗಳನ್ನು ಬಂಧಿಸಿ ತನಿಖೆ ಮುಂದುವರಿಸಿದರು.
ಸೋನಾಲಿ ಫೋಗಟ್ ಕೊಲೆ ಕೇಸ್ ತನಿಖೆ: ಇದೀಗ ಹರಿಯಾಣ ತಲುಪಿ ತನಿಖೆ ಚುರುಕುಗೊಳಿಸಿರುವ ಗೋವಾ ಪೊಲೀಸರಿಗೆ ಸೋನಾಲಿ ಫೋಗಟ್ ಸಾವಿಗೆ ಸಂಬಂಧಿಸಿದಂತೆ ಮಹತ್ವದ ಸಾಕ್ಷ್ಯ ಸಿಕ್ಕಿದೆ ಎನ್ನಲಾಗ್ತಿದೆ. ಹರಿಯಾಣದ ಹಿಸ್ಸಾರ್ ಜಿಲ್ಲೆಯ ಸಂತ ನಗರದಲ್ಲಿರುವ ದಿ. ಸೋನಾಲಿ ಫೋಗಟ್ ಅವರ ನಿವಾಸಕ್ಕೆ ಶುಕ್ರವಾರ ಭೇಟಿ ನೀಡಿದ ಗೋವಾ ಪೊಲೀಸ್ ತಂಡವು ಮೂರು ಹಳೆಯ ಡೈರಿಗಳನ್ನು ಪತ್ತೆ ಮಾಡಿದೆ. ಪ್ರಮುಖ ವಿಷಯಗಳನ್ನು ದಾಖಲಿಸಿರುವ 3 ಡೈರಿಗಳನ್ನು ಗೋವಾ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇದು ಮುಂದಿನ ತನಿಖೆಗೆ ಪೂರಕವಾಗಿದೆ.
ಇನ್ನು, ಸೋನಾಲಿ ಫೋಗಟ್ ಹತ್ಯೆ ಪ್ರಕರಣದಲ್ಲಿ ಗೋವಾ ಪೊಲೀಸರು ನಮಗೆ ಸಹಕರಿಸುತ್ತಿಲ್ಲ. ಆರೋಪಿಗಳಿಗೆ ಸಹಾಯ ಮಾಡಲು ಗೋವಾ ಪೊಲೀಸರು ಪ್ರಯತ್ನಿಸುತ್ತಿದ್ದಾರೆ ಎಂದು ಹರಿಯಾಣ ಪೊಲೀಸ್ ಅಧಿಕಾರಿಯೊಬ್ಬರು ಆರೋಪಿಸಿದ್ದಾರೆ.
ಇದನ್ನೂ ಓದಿ: ಫೋಗಟ್ ಸಾವು ಪ್ರಕರಣ: ಕರ್ಲಿಸ್ ಕ್ಲಬ್ ಮಾಲೀಕ, ಡ್ರಗ್ ಪೆಡ್ಲರ್ ಬಂಧನ
ಗೋವಾ ಪೊಲೀಸ್ ವರಿಷ್ಠಾಧಿಕಾರಿ ಶೋಬಿತ್ ಸಕ್ಸೇನಾ ಮಾಹಿತಿ ನೀಡಿ, ಈ ಪ್ರಕರಣದ ತನಿಖೆಗಾಗಿ ಗೋವಾ ಪೊಲೀಸರ ತಂಡವು ಎರಡು ದಿನಗಳ ಹಿಂದೆ ಹರಿಯಾಣಕ್ಕೆ ಭೇಟಿ ನೀಡಿದೆ. ಸಾವಿನ ಬಗ್ಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದ್ದಾರೆ. ಗೋವಾ ಪೊಲೀಸರು ಈಗಾಗಲೇ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಕರಣದ ಮುಂದಿನ ತನಿಖೆಯು ಹರಿಯಾಣದಲ್ಲಿ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಸೋನಾಲಿ ಫೋಗಟ್ ಸಾವಿಗೆ ಮಾದಕ ದ್ರವ್ಯ ಸೇವನೆ ಕಾರಣ: ಗೋವಾ ಐಜಿಪಿ