ನವದೆಹಲಿ: ಕೇಂದ್ರ ಸರ್ಕಾರದ ಮೂರು ವಿವಾದಿತ ಕೃಷಿ ಕಾಯ್ದೆಗೆ ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ನಿಷೇಧಕ್ಕೆ ಅಂಗೀಕಾರ ಸಿಕ್ಕಿದ್ದು, ಮಸೂದೆಗೆ ಈಗಾಗಲೇ ರಾಷ್ಟ್ರಪತಿಗಳ ಅಂಕಿತ ಸಹ ಸಿಕ್ಕಿದೆ. ಇದರ ಮಧ್ಯೆ ರೈತರ ಹೋರಾಟ ಮುಂದುವರೆದಿದ್ದು, ಕನಿಷ್ಠ ಬೆಂಬಲ ಬೆಲೆಗೆ ಪಟ್ಟು ಹಿಡಿದಿವೆ.
ರೈತರ ಹೋರಾಟದ ವಿಚಾರವಾಗಿ ಮಾತನಾಡಿರುವ ಭಾರತೀಯ ಕಿಸಾನ್ ಯೂನಿಯನ್ ವಕ್ತಾರ ರಾಕೇಶ್ ಟಿಕಾಯತ್, ಕೇಂದ್ರ ಸರ್ಕಾರದ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದಾರೆ. ರೈತರನ್ನ ವಿಭಜಿಸುವ ಕೆಲಸ ಕೇಂದ್ರ ಸರ್ಕಾರ ಮಾಡ್ತಿದ್ದು, ಯಾವುದೇ ಕಾರಣಕ್ಕೂ ಹೋರಾಟ ಹಿಂಪಡೆದುಕೊಂಡು ಮನೆಗೆ ಹೋಗುವ ಮಾತಿಲ್ಲ ಎಂದಿದ್ದಾರೆ. ಕನಿಷ್ಠ ಬೆಂಬಲ ಬೆಲೆ ಜಾರಿಗೆ ಬರುವವರೆಗೂ ಹೋರಾಟಗಾರರು ಮನೆಗೆ ಹೋಗುವುದಿಲ್ಲ ಎಂದಿರುವ ಟಿಕಾಯತ್, ರೈತರ ಹೋರಾಟ ವಿಭಜಿಸುವ ಕೆಲಸ ಮಾಡಬೇಡಿ ಎಂದಿದ್ದಾರೆ.
ಇದನ್ನೂ ಓದಿರಿ: ನಡುರಸ್ತೆಯಲ್ಲೇ ಅಮ್ಮ, ಮಗಳ ಮೇಲೆ ರಾಡ್ನಿಂದ ಅಮಾನವೀಯ ಹಲ್ಲೆ.. CCTVಯಲ್ಲಿ ದೃಶ್ಯ ಸೆರೆ
ಕೇಂದ್ರ ಸರ್ಕಾರದ ಬಳಿ ರೈತರು ಸಾವನ್ನಪ್ಪಿರುವ ಮಾಹಿತಿ ಇಲ್ಲ ಎಂದು ತಿಳಿಸಿದೆ. ಇನ್ಮುಂದೆ ನಾವು ಶವಯಾತ್ರೆ ನಡೆಸಲಿದ್ದೇವೆ ಎಂದರು. ಕೇಂದ್ರ ಸರ್ಕಾರಕ್ಕೆ ನಾವು ನೀಡಿರುವ ಗಡವು ಡಿಸೆಂಬರ್ 4ರಂದು ಮುಕ್ತಾಯಗೊಳ್ಳಲಿದ್ದು, ಆ ದಿನ ಸಭೆ ನಡೆಸಿ ಮುಂದಿನ ಯೋಜನೆ ಬಗ್ಗೆ ಕ್ರಮ ಕೈಗೊಳ್ಳಲಿದ್ದೇವೆ ಎಂದು ಟಿಕಾಯತ್ ತಿಳಿಸಿದರು.
ಕೇಂದ್ರ ಸರ್ಕಾರದ ವಿರುದ್ಧ ನವೆಂಬರ್ 29ರಂದು ಟ್ರ್ಯಾಕ್ಟರ್ ರ‍್ಯಾಲಿ ನಡೆಸಲು ರೈತರು ನಿರ್ಧಾರ ಕೈಗೊಂಡಿದ್ದರು. ಆದರೆ, ಡಿಸೆಂಬರ್ 4ರವರೆಗೆ ಕನಿಷ್ಠ ಬೆಂಬಲ ಬೆಲೆ ಬಗ್ಗೆ ನಿರ್ಧಾರ ಕೈಗೊಳ್ಳಲು ಸಮಯವಕಾಶ ನೀಡಿರುವ ಕಾರಣ ಅದನ್ನ ಮುಂದೂಡಿಕೆ ಮಾಡಲಾಗಿದೆ.