ಪಣಜಿ: ಇತ್ತೀಚೆಗೆ ಗೋವಾದಲ್ಲಿ ಭೂಗಳ್ಳರ ಹಾವಳಿ ಹೆಚ್ಚಾಗುತ್ತಿದೆ. ಸದ್ಯ ಗೋವಾ ಭೂಗಳ್ಳರು ಬ್ರಿಟನ್ನಿನ ನೂತನ ಗೃಹ ಕಾರ್ಯದರ್ಶಿ ಸುಯೆಲ್ಲಾ ಬ್ರಾವರ್‌ಮನ್ ಅವರ ತಂದೆ ಕ್ರಿಸ್ಟಿ ಫೆರ್ನಾಂಡಿಸ್ ಅವರ ಪೂರ್ವಜರ ಆಸ್ತಿಯನ್ನು ಕಬಳಿಸಲು ಹೊಂಚು ಹಾಕಿದ್ದಾರೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಅಕ್ರಮ ಭೂ ಕಬಳಿಕೆ ಮತ್ತು ಪರಿವರ್ತನೆಗೆ ಸಂಬಂಧಿಸಿದ ದೂರುಗಳನ್ನು ಪರಿಶೀಲಿಸಲು ಈ ವರ್ಷದ ಜುಲೈನಲ್ಲಿ ಪೊಲೀಸ್ ವರಿಷ್ಠಾಧಿಕಾರಿ (ಕ್ರೈಮ್ ಬ್ರಾಂಚ್) ನಿಧಿನ್ ವಲ್ಸನ್ ನೇತೃತ್ವದಲ್ಲಿ ಎಸ್‌ಐಟಿ ರಚಿಸಲಾಗಿದೆ. ಎಸ್‌ಐಟಿ ರಚನೆಯಾದಾಗಿನಿಂದ ಇದಕ್ಕೆ ಹಲವಾರು ದೂರುಗಳು ಬಂದಿವೆ.
ಅಸ್ಸಾಗಾವೊದಲ್ಲಿರುವ ತಮ್ಮ ಪೂರ್ವಜರ ಆಸ್ತಿಯನ್ನು ಕಾನೂನುಬಾಹಿರವಾಗಿ ಕಬಳಿಸಲಾಗಿದೆ ಎಂದು ಕ್ರಿಸ್ಟಿ ಫೆರ್ನಾಂಡಿಸ್ ಗೋವಾ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ವಲ್ಸನ್ ಖಚಿತಪಡಿಸಿದ್ದಾರೆ. ದೂರನ್ನು ಸ್ವೀಕರಿಸಿದ ಎಸ್‌ಐಟಿ ಎಫ್‌ಐಆರ್ ದಾಖಲಿಸಿದೆ. ಭೂಕಬಳಿಕೆ ಪ್ರಕರಣಗಳ ತನಿಖೆಗಾಗಿ ಎಸ್‌ಐಟಿ ರಚಿಸಲಾಗಿದೆ ಎಂಬುದನ್ನು ತಿಳಿದ ನಂತರ, ಯುಕೆಯಲ್ಲಿರುವ ಭಾರತೀಯ ಮೂಲದ ಫೆರ್ನಾಂಡಿಸ್ ಅವರು ಗೋವಾ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗೋವಾ ಮುಖ್ಯಮಂತ್ರಿ, ಪೊಲೀಸ್ ಮಹಾನಿರ್ದೇಶಕರು ಮತ್ತು ಎನ್‌ಆರ್‌ಐ ಆಯುಕ್ತರಿಗೆ ಕ್ರಿಸ್ಟಿ ದೂರು ನೀಡಿದ್ದಾರೆ.
ದೂರಿನಲ್ಲಿ ಉಲ್ಲೇಖಿಸಲಾದ ಆಸ್ತಿಯು ಫೆರ್ನಾಂಡಿಸ್ ಮತ್ತು ಇತರ ಸಹ ಮಾಲೀಕರಿಗೆ ಸೇರಿದ್ದು ಎಂದು ಮೂಲಗಳು ತಿಳಿಸಿವೆ. ಭಾರತೀಯ ದಂಡ ಸಂಹಿತೆಯ ಸೆಕ್ಷನ್ 419 ಮತ್ತು 420 ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಭೂಗಳ್ಳರು ವಿದೇಶದಲ್ಲಿ ವಾಸಿಸುವ ಜನರ ಆಸ್ತಿಗಳನ್ನು ಗುರಿಯಾಗಿಸಿಕೊಂಡಿರುವುದರಿಂದ, ತಮ್ಮ ಭೂಮಿಗಳು ತಮ್ಮ ಹೆಸರಿನಲ್ಲಿಯೇ ಇರುವುದನ್ನು ಪರಿಶೀಲಿಸಿ ಖಚಿತಪಡಿಸಿಕೊಳ್ಳಬೇಕು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಏನಾದರೂ ವ್ಯತ್ಯಾಸವಾಗಿರುವುದು ಕಂಡು ಬಂದಲ್ಲಿ ಪೊಲೀಸರಿಗೆ ದೂರು ನೀಡಬೇಕೆಂದು ಎಸ್‌ಐಟಿ ತಿಳಿಸಿದೆ.
ಇದನ್ನೂ ಓದಿ: ಭೂಕಬಳಿಕೆಗೆ ನಕಲಿ ದಾಖಲೆ ಸೃಷ್ಟಿ ಆರೋಪ: 17 ಜನರ ವಿರುದ್ಧ 4 ಪ್ರತ್ಯೇಕ ಪ್ರಕರಣ ದಾಖಲು