ಪಾಟ್ನಾ (ಬಿಹಾರ): ಇತ್ತೀಚೆಗೆ ಬಿಹಾರದಲ್ಲಿ ಭಾರಿ ಸದ್ದು ಮಾಡುತ್ತಿರುವ ಆಡಿಯೋ ಪ್ರಕರಣದಲ್ಲಿ ಮಾಜಿ ಸಿಎಂ ಲಾಲೂ ಪ್ರಸಾದ್ ಯಾದವ್ಗೆ ಸಂಕಷ್ಟ ಎದುರಾಗಿದೆ. ಶಾಸಕ ಲಲನ್ ಕುಮಾರ್ ಅವರು ಲಾಲೂ ಪ್ರಸಾದ್ ಯಾದವ್ ವಿರುದ್ಧ ದೂರು ದಾಖಲಿಸಿದ್ದಾರೆ.
ಬಿಹಾರ ವಿಧಾನಸಭೆ ಆವರಣದಲ್ಲಿ ಈಟಿವಿ ಭಾರತ ವರದಿಗಾರೊಂದಿಗೆ ಮಾತನಾಡಿದ ಅವರು ಈ ವಿಚಾರವನ್ನು ಬಹಿರಂಗಪಡಿಸಿದ್ದು, ನನಗೆ ಕಾನೂನಿನ ಮೇಲೆ ಸಂಪೂರ್ಣ ನಂಬಿಕೆಯಿದೆ. ಪಕ್ಷ ಮತ್ತು ಸರ್ಕಾರ ನನ್ನ ಬೆಂಬಲಕ್ಕೆ ನಿಂತಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಈಗ ರಚನೆಯಾಗಿರುವ ನಿತೀಶ್ ಕುಮಾರ್ ನೇತೃತ್ವದ ಹೊಸ ಸರ್ಕಾರವನ್ನು ಉರುಳಿಸಲು ಲಾಲೂ ಪ್ರಸಾದ್ ಯಾದವ್ ಪಿತೂರಿ ನಡೆಸುತ್ತಿದ್ದು, ನನಗೆ ಕರೆ ಮಾಡಿ ತಮ್ಮ ಪಕ್ಷಕ್ಕೆ ಸೆಳೆಯಲು ಯತ್ನಿಸಿದರು. ಇದು ಪ್ರಜಾಪ್ರಭುತ್ವಕ್ಕೆ ತುಂಬಾ ಆತಂಕಕಾರಿ ವಿಷಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಆರ್ಜೆಡಿ ಮುಖ್ಯಸ್ಥ ಲಾಲೂಗೆ ಮತ್ತೆ ಸಂಕಷ್ಟ: ಜಾರ್ಖಂಡ್ ಹೈಕೋರ್ಟ್ನಲ್ಲಿ ಪಿಐಎಲ್ ಸಲ್ಲಿಕೆ
ಲಾಲೂ ಅವರು ನನ್ನಂಥ ಹೊಸ ಶಾಸಕರನ್ನು ಸೆಳೆಯಲು ಯತ್ನಿಸುತ್ತಿರುವುದು ನಾಚಿಕೆಗೇಡಿನ ಸಂಗತಿ. ಅವರ ವಿರುದ್ಧ ದೂರು ದಾಖಲಿಸಿದ್ದು, ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದೇನೆ. ಕಾನೂನಿನ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದೆ. ತಪ್ಪು ಮಾಡಿದವರ ವಿರುದ್ಧ ಕಾನೂನು ಕೆಲಸ ಮಾಡುತ್ತದೆ ಎಂದು ಲಲನ್ ಕುಮಾರ್ ಹೇಳಿದ್ದಾರೆ.