ಲಖೀಂಪುರ್ ಖೇರಿ(ಉತ್ತರ ಪ್ರದೇಶ): ಲಖೀಂಪುರ್ ಖೇರಿ ಹಿಂಸಾಚಾರ ಪೂರ್ವಯೋಜಿತ ಎಂದು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ - ಎಸ್‌ಐಟಿ ಹೇಳಿದ್ದು, 13 ಆರೋಪಿಗಳ ವಿರುದ್ಧ ಹೊಸ ಸೆಕ್ಷನ್‌ಗಳನ್ನು ಸೇರಿಸಲು ಚೀಫ್ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ (ಸಿಜೆಎಂ) ಮುಂದೆ ಅರ್ಜಿ ಸಲ್ಲಿಸಿದೆ.
ಐಪಿಸಿಯ ಸೆಕ್ಷನ್ 279, 338 ಮತ್ತು 304ಎ ಬದಲಿಗೆ ವಾರಂಟ್‌ನಲ್ಲಿ ಹೊಸ ಸೆಕ್ಷನ್‌ಗಳನ್ನು ಸೇರಿಸಲು ಎಸ್‌ಐಟಿ ತನಿಖಾಧಿಕಾರಿ ವಿದ್ಯಾರಾಮ್ ದಿವಾಕರ್ ಅವರು ಕಳೆದ ವಾರ ಸಿಜೆಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಘಟನೆಯು ಯೋಜಿತ ಮತ್ತು ಉದ್ದೇಶಪೂರ್ವಕ ಕೃತ್ಯವಾಗಿದೆಯೇ ಹೊರತು ನಿರ್ಲಕ್ಷ್ಯದಿಂದ ಅಲ್ಲ ಎಂದು ತನಿಖಾಧಿಕಾರಿ ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 307 (ಕೊಲೆ ಯತ್ನ), 326 (ಸ್ವಯಂಪ್ರೇರಿತವಾಗಿ ಅಪಾಯಕಾರಿ ಶಸ್ತ್ರಾಸ್ತ್ರಗಳು ಅಥವಾ ವಿಧಾನಗಳಿಂದ ಗಂಭೀರವಾದ ಗಾಯ ಉಂಟುಮಾಡುವುದು), ಸೆಕ್ಷನ್ 279 ಬದಲಿಗೆ (ಸಾರ್ವಜನಿಕ ಮಾರ್ಗದಲ್ಲಿ ರಾಶ್ ಡ್ರೈವಿಂಗ್) ಸೆಕ್ಷನ್ 34 (ಸಾಮಾನ್ಯ ಉದ್ದೇಶಕ್ಕಾಗಿ ಹಲವಾರು ವ್ಯಕ್ತಿಗಳಿಂದ ಕೃತ್ಯಗಳು) 338 ಹಾಗೂ 304A ಸೇರಿಸಲು ವಿನಂತಿಸಿದ್ದಾರೆ.
ಅಕ್ಟೋಬರ್ 3 ರಂದು, ಕೇಂದ್ರ ಸಚಿವ ಅಜಯ್ ಮಿಶ್ರಾ ಟೆನಿ ಅವರ ಪುತ್ರ ಆಶಿಶ್ ಮಿಶ್ರಾ ಅವರಿಗೆ ಸೇರಿದ ಎಸ್‌ಯುವಿ ಕಾರು ಲಖೀಂಪುರ್ ಖೇರಿಯಲ್ಲಿ ಪ್ರತಿಭಟನೆ ಮೆರವಣಿಗೆ ಹೊರಟಿದ್ದ ರೈತರ ಮೇಲೆ ಹರಿದಿತ್ತು. ಈ ವೇಳೆ ನಾಲ್ವರು ರೈತರು ಸೇರಿ ಎಂಟು ಮಂದಿ ಸಾವನ್ನಪ್ಪಿದರು.
ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ಆರೋಪಿಗಳಾದ ಆಶಿಶ್ ಮಿಶ್ರಾ, ಲವ್‌ಕುಶ್, ಆಶಿಶ್ ಪಾಂಡೆ, ಶೇಖರ್ ಭಾರ್ತಿ, ಅಂಕಿತ್ ದಾಸ್, ಲತೀಫ್, ಶಿಶುಪಾಲ್, ನಂದನ್ ಸಿಂಗ್, ಸತ್ಯಂ ತ್ರಿಪಾಠಿ, ಸುಮಿತ್ ಜೈಸ್ವಾಲ್, ಧರ್ಮೇಂದ್ರ ಬಂಜಾರಾ, ರಿಂಕು ರಾಣಾ ಮತ್ತು ಉಲ್ಲಾಸ್ ತ್ರಿವೇದಿಯನ್ನು ಬಂಧಿಸಲಾಗಿದೆ. 13 ಮಂದಿ ಬಂಧಿತರನ್ನು ಲಖೀಂಪುರ್ ಖೇರಿ ಜಿಲ್ಲಾ ಕಾರಾಗೃಹದಲ್ಲಿ ಇರಿಸಲಾಗಿದೆ.
ಇದನ್ನೂ ಓದಿ: ಸೋತ ಅಭ್ಯರ್ಥಿಯಿಂದ ದಲಿತರಿಗೆ ಥಳಿತ.. ಉಗುಳು ನೆಕ್ಕಿಸಿ ಅಮಾನವೀಯ ವರ್ತನೆ ಆರೋಪ