ಗಯಾ (ಬಿಹಾರ): ಈಕೆ ಧೈರ್ಯವಂತ ಪೊಲೀಸ್ ಅಧಿಕಾರಿ. ಬಿಹಾರದ ಅಪರಾಧ ಜಗತ್ತಿನ ವಿರುದ್ಧ ದಿಟ್ಟ ಹೋರಾಟ ನಡೆಸುತ್ತಿದ್ದಾರೆ. ಇಂತಹ ರೆಬಲ್ ಅಧಿಕಾರಿಗೆ ಮಾರಕ ಕರುಳು ಕ್ಯಾನ್ಸರ್ ಬಂದೊದಗಿದೆ. ಈಗ ಅವರು ರೌಡಿಗಳ ಜೊತೆಗೆ ಪ್ರಾಣಾಂತಕ ಕಾಯಿಲೆಯ ವಿರುದ್ಧ ಹೋರಾಡಬೇಕಿದೆ. ಯಾರಪ್ಪಾ ಆ ಅಧಿಕಾರಿ ಅಂತೀರಾ?. ಬಿಹಾರದ ಗಯಾ ಜಿಲ್ಲೆಯ 54 ವರ್ಷದ ಸಬ್ ಇನ್ಸ್‌ಪೆಕ್ಟರ್ ಕುಂಕುಮ್ ಕುಮಾರಿ. ಇವರು ಕ್ಯಾನ್ಸರ್ಗೆ ತುತ್ತಾಗಿದ್ದಾರೆ. ಸದ್ಯ ಮಗಧ ವೈದ್ಯಕೀಯ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಪೊಲೀಸ್ ಅಧಿಕಾರಿ ಕುಂಕುಮ್ ಕುಮಾರಿ 5 ವರ್ಷಗಳಿಂದ ಕ್ಯಾನ್ಸರ್ನಿಂದ ಬಳಲುತ್ತಿದ್ದಾರೆ. ಆದರೂ ಅವರು ಧೃತಿಗೆಡದೇ ಕರ್ತವ್ಯದಲ್ಲಿದ್ದೇ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರ ಜೊತೆಗೆ ಮಾರಣಾಂತಿಕ ಕಾಯಿಲೆಗೆ ತುತ್ತಾದ ಅದೆಷ್ಟೋ ಜನರಿಗೆ ಮಾದರಿಯಾಗಿದ್ದಾರೆ.
ಠಾಣೆಯಲ್ಲೇ ಕುಸಿದು ಬಿದ್ದಿದ್ದ ಅಧಿಕಾರಿ: ಅದು 2019ರಲ್ಲಿ ನಡೆದ ಘಟನೆ. ಮಗಧ ಮೆಡಿಕಲ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದಾಗ, ಕುಂಕುಮ್ ಕುಮಾರಿ ಇದ್ದಕ್ಕಿದ್ದಂತೆ ಕುಸಿದುಬಿದ್ದರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು. ತಪಾಸಣೆಗೆ ವೇಳೆ ಅವರಿಗೆ ಕರುಳಿನ ಕ್ಯಾನ್ಸರ್ ಇರುವುದು ಪತ್ತೆಯಾಗಿತ್ತು. ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ದೆಹಲಿಗೆ ಕಳುಹಿಸಲಾಯಿತು. ಇದಾದ ಬಳಿಕ ಅವರು ಪ್ರತಿ ಎರಡು ತಿಂಗಳಿಗೊಮ್ಮೆ ಚಿಕಿತ್ಸೆಗಾಗಿ ದೆಹಲಿಯ ಅಪೋಲೋ ಆಸ್ಪತ್ರೆಗೆ ಹೋಗಬೇಕಾಗಿದೆ.
ಪುರ್ನಿಯಾ ಜಿಲ್ಲೆಯ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಂಬಾಗ್ ಪ್ರದೇಶದ ನಿವಾಸಿಯಾಗಿರುವ ಕುಂಕುಮ್ ಕುಮಾರಿ, 1989ರಲ್ಲಿ ಬಿಹಾರ ಪೊಲೀಸ್ ಕಾನ್ಸ್‌ಟೇಬಲ್ ಆಗಿ ಸೇವೆಗೆ ಸೇರಿಕೊಂಡರು. ಇದಾದ 30 ವರ್ಷಗಳ ತರುವಾಯ ಅಂದರೆ, 2019ರಲ್ಲಿ ಸಬ್ಇನ್ಸ್ಪೆಕ್ಟರ್ ಹುದ್ದೆಗೆ ಬಡ್ತಿ ಪಡೆದರು. ಸೇವೆಯೆಂಬುದು ಸಾಮಾಜಿಕ ಜವಾಬ್ದಾರಿ ಎಂದು ತಿಳಿದುಕೊಂಡಿರುವ ಅವರು ಪತಿಯನ್ನು ಕಳೆದುಕೊಂಡಿದ್ದಾರೆ. ಅವರಿಗೆ ಓರ್ವ ಮಗಳಿದ್ದಾಳೆ.
ಧೈರ್ಯಂ ಸರ್ವತ್ರ ಸಾಧನಂ: ಕ್ಯಾನ್ಸರ್ನಿಂದ ಬಳಲುತ್ತಿರುವ ಪೊಲೀಸ್ ಅಧಿಕಾರಿ ಕುಂಕುಮ್ ಕುಮಾರಿ ಅವರ ಮಾತುಗಳಲ್ಲೇ ಹೇಳುವುದಾದರೆ, ನಾನು ಕೆಲಸದಲ್ಲಿ ಅಪರಾಧಿಗಳ ವಿರುದ್ಧ ಹೋರಾಡುವಂತೆ, ಕ್ಯಾನ್ಸರ್ ವಿರುದ್ಧವೂ ಹೋರಾಡಲು ನಿರ್ಧರಿಸಿದ್ದೇನೆ. ಐದು ವರ್ಷಗಳ ಹಿಂದೆ ವೈದ್ಯರು ನನಗೆ ಕೊಲೊನ್ (ಕರುಳು) ಕ್ಯಾನ್ಸರ್ ಎಂದು ಹೇಳಿದ್ದರು. ಇದರಿಂದ ನಾನು ಎಂದೂ ಕುಗ್ಗಿಲ್ಲ. ರೋಗದ ವಿರುದ್ಧ ಹೋರಾಡಲು ಸಾಕಷ್ಟು ಧೈರ್ಯ ಬೇಕು. ಅದು ನನ್ನಲ್ಲಿದೆ ಎಂದು ಅವರು ಹೇಳುತ್ತಾರೆ.
ಕ್ಯಾನ್ಸರ್ ವಿರುದ್ಧ ಹೋರಾಡುತ್ತಿರುವವರಿಗೆ ಉದಾಹರಣೆಯಾಗಿರುವ ಅಧಿಕಾರಿ, ಇಂತಹ ಸಂದಿಗ್ಧ ಸಮಯದಲ್ಲಿ ಧೈರ್ಯವನ್ನು ಕಳೆದುಕೊಳ್ಳಬಾರದು. ಮುಖ್ಯವಾಗಿ ನಿಮ್ಮ ಮೇಲೆ ನಿಮಗೆ ಅಗಾಧ ಭರವಸೆ ಇರಬೇಕು. ಏನೇ ತೊಂದರೆಗಳು ಬಂದರೂ, ಆತ್ಮವಿಶ್ವಾಸದಿಂದ ಎದುರಿಸಬೇಕು. ಅದಮ್ಯ ಮನೋಸ್ಥೈರ್ಯ ನಮ್ಮದಾಗಿರಲಿ ಎಂದು ಅವರು ಸಲಹೆ ನೀಡಿದರು.
ಇದನ್ನೂ ಓದಿ: 8 ಮಂದಿ ಭಾರತೀಯರಿಗೆ ಮರಣದಂಡನೆ ಶಿಕ್ಷೆ ವಿಧಿಸಿದ ಕತಾರ್ ಕೋರ್ಟ್: ಆಘಾತ ವ್ಯಕ್ತಪಡಿಸಿದ ವಿದೇಶಾಂಗ ಸಚಿವಾಲಯ