ನವದೆಹಲಿ: ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ಯೋಜನೆ ರೂಪಿಸಿದ್ದ ದೆಹಲಿಯ ಆಪ್ ಸರ್ಕಾರ ಇದೀಗ, ನೋಂದಾಯಿತ ಕಾರ್ಮಿಕರಿಗೂ ಈ ಸೌಲಭ್ಯವನ್ನು ವಿಸ್ತರಿಸಿದೆ. ದೆಹಲಿ ಸರ್ಕಾರ ಬುಧವಾರದಿಂದ ಈ ಯೋಜನೆಯನ್ನು ಆರಂಭಿಸಿದ್ದು, ಕಾರ್ಮಿಕರು ಡಿಟಿಸಿ ಮತ್ತು ಕ್ಲಸ್ಟರ್ ಬಸ್‌ಗಳಲ್ಲಿ ಉಚಿತ ಪ್ರಯಾಣದ ಸೌಲಭ್ಯವನ್ನು ಪಡೆಯಲಿದ್ದಾರೆ.
ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರು ಇಂದು ಯೋಜನೆಗೆ ಚಾಲನೆ ನೀಡಿದರು. ಇದೇ ವೇಳೆ ಯೋಜನೆಯ ಫಲಾನುಭವಿಗಳಿಗೆ ಉಚಿತ ಬಸ್ ಪಾಸ್ ವಿತರಿಸಿದರು. ದೆಹಲಿಯಲ್ಲಿ ಇಂದು ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ಯೋಜನೆಯನ್ನು ಪ್ರಾರಂಭಿಸಲಾಗಿದೆ. ನೋಂದಾಯಿತ ಕಾರ್ಮಿಕರಾದ ಕಾರ್ಪೆಂಟರ್, ಮೇಸ್ತ್ರಿ, ಎಲೆಕ್ಟ್ರಿಷಿಯನ್, ಗಾರ್ಡ್ ಮುಂತಾದ ಕಾರ್ಮಿಕರು ಸರ್ಕಾರದ ಈ ಸೌಲಭ್ಯದ ಪ್ರಯೋಜನವನ್ನು ಪಡೆಯಲಿದ್ದಾರೆ ಎಂದು ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಟ್ವೀಟ್ ಮಾಡಿದ್ದಾರೆ.
ಕಟ್ಟಡ ನಿರ್ಮಾಣ ಸ್ಥಳದಲ್ಲಿ ಕೆಲಸ ಮಾಡುವ ಬೇಲ್ದಾರ್, ಮೇಸ್ತ್ರಿಗಳು, ಬಡಗಿಗಳು, ಎಲೆಕ್ಟ್ರಿಷಿಯನ್, ಗಾರ್ಡ್ ಮತ್ತು ಇತರ ಕಾರ್ಮಿಕರು ಇದರ ಪ್ರಯೋಜನವನ್ನು ಪಡೆಯಬಹುದು. ಕೂಲಿಕಾರರಿಗೆ ಗರಿಷ್ಠ ನೆರವು ನೀಡಬೇಕೆಂಬುದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪ್ರಯತ್ನವಾಗಿದೆ ಎಂದು ಅವರು ಬರೆದಿದ್ದಾರೆ.
ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕಾರ್ಮಿಕರನ್ನು 'ಭಾರತದ ಸೃಷ್ಟಿಕರ್ತರು' ಎಂದು ಪರಿಗಣಿಸುತ್ತಾರೆ. ಇನ್ನು ಮುಂದೆ ಕೂಲಿ ಕಾರ್ಮಿಕರು ಪ್ರಯಾಣಕ್ಕೆ ಹಣ ವ್ಯಯಿಸಬೇಕಾಗಿಲ್ಲ. ಯೋಜನೆಯಡಿ ಕಾರ್ಮಿಕರಿಗೆ ಪ್ರತಿ ತಿಂಗಳು ಕನಿಷ್ಠ 800 ರೂಪಾಯಿ ಉಳಿತಾಯವಾಗಲಿದೆ. ಹಣದುಬ್ಬರದಿಂದ ಕಷ್ಟಪಡುತ್ತಿರುವ ಕಾರ್ಮಿಕರಿಗೆ ಸ್ವಲ್ಪ ಪರಿಹಾರ ಸಿಗಲಿದೆ ಎಂದು ಹೇಳಿದ್ದಾರೆ. ಆಪ್ ಸರ್ಕಾರ 2020 ರಿಂದ ಡಿಟಿಸಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯವನ್ನು ಒದಗಿಸುತ್ತಿದೆ.
ಓದಿ: ಪ್ರಧಾನಿ ಮೋದಿ ಫ್ರಾನ್ಸ್ ಭೇಟಿ: ಮ್ಯಾಕ್ರೋನ್ ಜೊತೆ ಉಕ್ರೇನ್ ಸಂಘರ್ಷ, ಆಫ್ಘನ್ ಬಿಕ್ಕಟ್ಟು ಚರ್ಚೆ