ಕಛ್ (ಗುಜರಾತ್): ಭುಜ್‌ನಲ್ಲಿರುವ ನರನಾರಾಯಣ ದೇವ್ ವಿಗ್ರಹಕ್ಕೆ 200 ವರ್ಷಗಳು ಪೂರ್ಣಗೊಂಡಿದ್ದು ದ್ವಿಶತಮಾನೋತ್ಸವ ಆಯೋಜಿಸಲಾಗಿದೆ. ಇದರ ಅಂಗವಾಗಿ ವಿವಿಧ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. 11 ಸಾವಿರ ಕೆಜಿ ಗೋಮಯದಿಂದ ಸಿದ್ಧಪಡಿಸಿರುವ ಗೋವಿನ ವೈಭವ ಪ್ರದರ್ಶನ ಕಣ್ಮನ ಸೆಳೆಯುವಂತಿದೆ. ಹಸು ಆಧಾರಿತ ಕೃಷಿಯ ಪ್ರಯೋಜನಗಳನ್ನು ಇಲ್ಲಿ ವಿವರಿಸಲಾಗಿದೆ.
ಪ್ರಥಮ ಬಾರಿಗೆ 250 ಎಕರೆ ಪ್ರದೇಶದಲ್ಲಿ ನರನಾರಾಯಣ ದೇವ್ ದ್ವಿಶತಮಾನೋತ್ಸವವನ್ನು ಅದ್ಧೂರಿಯಾಗಿ ನಡೆಸಲಾಗುತ್ತಿದೆ. ಏಪ್ರಿಲ್ 17ರಿಂದ 26ರವರೆಗೆ 9 ದಿನಗಳ ಕಾಲ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ಕಳೆದ ಮೂರು ತಿಂಗಳಿಂದ ಸಿದ್ಧತೆ ನಡೆಯುತ್ತಿದೆ. ದೇಶ-ವಿದೇಶಗಳಿಂದ ಲಕ್ಷಾಂತರ ಭಕ್ತರು ಉತ್ಸವದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಗೋಮಯ ಪ್ರದರ್ಶನ: ದ್ವಿಶತಮಾನೋತ್ಸವ ಅಂಗವಾಗಿ ಗೋವಿನ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸುವ ಪ್ರಯತ್ನವಿದು. ಈ ಹಿನ್ನೆಲೆಯಲ್ಲಿ 11 ಸಾವಿರ ಕೆಜಿ ಗೋಮಯದಿಂದ ಗೋವಿನ ವೈಭವ ಪ್ರದರ್ಶನ ಏರ್ಪಡಿಸಲಾಗಿದೆ. ಗೋ ಆಧಾರಿತ ಕೃಷಿಯ ಮಹತ್ವ, ಗೋವಿನ ಮಹಿಮೆ, ಗೋವಿನ ವೀರಗಾಥೆಗಳು, ಗೋಶಾಲೆ ಸೇರಿದಂತೆ ಪ್ರಾಚೀನ ವೈಭವವನ್ನು ಸೃಷ್ಟಿಸಲಾಗಿದೆ. ಈ ಗೋಮಯ ಪ್ರದರ್ಶನವನ್ನು ಭಾರತೀಯ ಜಾನುವಾರು ತಳಿಗೆ ಸಮರ್ಪಿಸಲಾಗಿದೆ ಎಂದು ಭುಜ್‌ನ ಸ್ವಾಮಿನಾರಾಯಣ ದೇವಸ್ಥಾನದ ಸ್ವಾಮಿ ದೇವಚರಣ್ ದಾಸ್ ತಿಳಿಸಿದರು.
ಗೋವಿನ ವೈಭವವನ್ನು ಬಿಂಬಿಸುವ ವಿಶ್ವದ ಮೊದಲ ಪ್ರದರ್ಶನ ಇದಾಗಿದೆ. ಪ್ರದರ್ಶನದ ಮುಖ್ಯ ಉದ್ದೇಶ ಜನರನ್ನು ನೇರವಾಗಿ ಅಥವಾ ಪರೋಕ್ಷವಾಗಿ ತಾಯಿ ಗೋವಿನ ಜೊತೆ ಸಂಪರ್ಕಿಸುವುದು. ಗೋವಿನ ಮಹಿಮೆಯನ್ನು ಜನತೆ ಅರಿತುಕೊಳ್ಳಬೇಕೆಂಬುದೇ ಆಗಿದೆ. ಈ ಪ್ರದರ್ಶನವು 2.5 ಎಕರೆ ಪ್ರದೇಶದಲ್ಲಿ ಹರಡಿದೆ. ಎರಡು ಸಾಕ್ಷ್ಯ ಚಿತ್ರಗಳನ್ನು ಸಿದ್ಧಪಡಿಲಾಗಿದೆ ಎಂದು ಸ್ವಾಮಿ ತಿಳಿಸಿದರು.
ಹಸುವಿನ ಸಗಣಿ ಮತ್ತು ಗೋಮೂತ್ರವನ್ನು ಹಲವು ವಿಧಗಳಲ್ಲಿ ಬಳಸಲಾಗುತ್ತದೆ. ಅವುಗಳಲ್ಲಿ ಕೆಲವು ಔಷಧ ಹಾಗೂ ಗೊಬ್ಬರ ತಯಾರಿಸುವ ಪ್ರದರ್ಶನ ಸಹ ಏರ್ಪಡಿಸಲಾಗಿದೆ. ಇಲ್ಲಿಯೇ ಪ್ರಾತ್ಯಕ್ಷಿಕೆಯಲ್ಲಿ ವೈದ್ಯರು ಪಂಚಗವ್ಯ ಚಿಕಿತ್ಸೆಯ ಬಗ್ಗೆ ಕೂಲಂಕಷವಾಗಿ ವಿವರಿಸಿ ಮಾರ್ಗದರ್ಶನ ನೀಡುವ ವ್ಯವಸ್ಥೆ ಮಾಡಲಾಗಿದೆ. ಅದಕ್ಕಾಗಿಯೇ ಹಸುವಿನ ಸಗಣಿ ಕರಕುಶಲತೆಯ ಪ್ರತ್ಯೇಕ ಘಟಕ ಸಹ ಸ್ಥಾಪಿಸಲಾಗಿದೆ. ಇದರಲ್ಲಿ ಹಸುವಿನ ಸಗಣಿಯಿಂದ ವಿವಿಧ ರೀತಿಯ ಅಲಂಕಾರಿಕ ವಸ್ತುಗಳನ್ನು ತಯಾರಿಸಲಾಗಿದೆ ಎಂದು ಮಾಹಿತಿ ಮಾಡಿದರು.
ಸಹಜ ಅನುಭೂತಿ: ಪ್ರದರ್ಶನ ಸುತ್ತಲಿನ ಗೋಡೆಗಳನ್ನು ಸಂಪೂರ್ಣವಾಗಿ ಹಸುವಿನ ಸಗಣಿಯಿಂದ ನಿರ್ಮಿಸಲ್ಪಟ್ಟಿದೆ. ಒಟ್ಟು ಒಂದು ಲಕ್ಷ ಚದರ ಮೀಟರ್ ವಿಸ್ತೀರ್ಣದ ಗೋಡೆಗಳನ್ನು 11 ಸಾವಿರ ಕೆಜಿ ಹಸುವಿನ ಸಗಣಿ ಬಳಕೆ ಮಾಡಿ ಕಟ್ಟಲಾಗಿದೆ. ಸಂಪೂರ್ಣ ಪ್ರದರ್ಶನದಲ್ಲಿ 3100ಕ್ಕೂ ಹೆಚ್ಚು ಹಸುವಿನ ಸಗಣಿ ಸ್ತಂಭಗಳನ್ನೂ ಸ್ಥಾಪಿಸಲಾಗಿದೆ. ಪ್ರದರ್ಶನವನ್ನು ನೋಡಲು ಬರುವ ಪ್ರವಾಸಿಗರಿಗೆ ಮತ್ತು ಒಳಗೆ ಬಳಸಲಾದ ಬಣ್ಣಗಳು ಸಹಜ ಅನುಭೂತಿಯನ್ನು ನೀಡುತ್ತವೆ ಎಂದು ದೇವಚರಣ್ ದಾಸ್ ಹೇಳಿದರು.
ಮತ್ತೊಂದು ಗಮನಾರ್ಹ ಸಂಗತಿಯೆಂದರೆ, ನರನಾರಾಯಣ ದೇವಸ್ಥಾನದಿಂದ ಹಸು ಆಧಾರಿತ ಕೃಷಿ ಅಭಿಯಾನವು ಕಳೆದ ಒಂದು ವರ್ಷದಿಂದ ನಡೆಯುತ್ತಿದೆ. ಅಭಿಯಾನದಲ್ಲಿ ಸುಮಾರು 255 ರೈತರು ನೋಂದಾಯಿಸಿಕೊಂಡಿದ್ದರು. ಅವರಲ್ಲಿ ಸುಮಾರು 160 ರೈತರು ಹಸು ಆಧಾರಿತ ಬೇಸಾಯವನ್ನು ಆಧರಿಸಿ ಚಳಿಗಾಲದ ಬಿತ್ತನೆ ಮಾಡಿದ್ದರು. ಚಳಿಗಾಲದ ನಾಟಿ ಯಶಸ್ವಿಯಾಗಿದೆ. ಆ ರೈತರು ಇಂದು ಇತರ ರೈತರಿಗೂ ಪ್ರೇರೇಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ವಿವರಿಸಿದರು.
ಇದನ್ನೂ ಓದಿ: ಹವಾಮಾನ ಬದಲಾವಣೆ: ಅಸ್ಸೋಂನಲ್ಲಿ ಗಣನೀಯವಾಗಿ ಇಳಿಕೆ ಕಂಡ ಟೀ ಉತ್ಪಾದನೆ