ಕುನೋ (ಮಧ್ಯಪ್ರದೇಶ): ನಮೀಬಿಯಾದಿಂದ ತಂದಿರುವ 2 ಚೀತಾಗಳು ಕ್ವಾರಂಟೈನ್ ಅವಧಿ ಮುಗಿಸಿ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಹೋದ 24 ಗಂಟೆಗಳಲ್ಲೇ ಅವುಗಳು ಮೊದಲ ಬೇಟೆಯಾಡಿವೆ. ಈ ಬಗ್ಗೆ ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದು, ಚೀತಾಗಳು ಆಹಾರವನ್ನು ಹುಡುಕಿಕೊಂಡು ಹೋಗಿ ಬೇಟೆಯಾಡಿವೆ. ಯಾವ ಪ್ರಾಣಿಯನ್ನು ಬಲಿ ಪಡೆದಿವೆ ಎಂಬ ಬಗ್ಗೆ ವಿವರ ಸಿಕ್ಕಿಲ್ಲ ಎಂದು ಹೇಳಿದ್ದಾರೆ.
ಸೆಪ್ಟೆಂಬರ್ 17 ರಂದು ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಹಿನ್ನೆಲೆ ನಮೀಬಿಯಾದಿಂದ ತರಲಾಗಿದ್ದ 5 ಚೀತಾಗಳನ್ನು ಕೊನೋ ರಾಷ್ಟ್ರೀಯ ಉದ್ಯಾನವನದಲ್ಲಿ ಬಿಡುಗಡೆ ಮಾಡಲಾಗಿತ್ತು. ಅವುಗಳು ಇಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳಲು ಕಾಡಿನ ಒಂದು ಪ್ರದೇಶದಲ್ಲಿ ವೈದ್ಯರ ನಿಗಾದಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.
ನಿನ್ನೆ 2 ಚೀತಾಗಳನ್ನು ದಟ್ಟಾರಣ್ಯಕ್ಕೆ ಬಿಡಲಾಗಿತ್ತು. ಕಾಡಿಗೆ ಎಂಟ್ರಿ ಕೊಟ್ಟಿದ್ದ ಜಗತ್ತಿನ ಅತಿವೇಗದ ಪ್ರಾಣಿಗಳು ಬೇಟೆಯಾಡಿವೆ. ಈ ಮೂಲಕ ಅವುಗಳು ಭಾರತದ ವಾತಾವರಣಕ್ಕೆ ಹೊಂದಿಕೊಳ್ಳುತ್ತಿವೆ ಎಂಬುದನ್ನು ತೋರಿಸಿಕೊಟ್ಟಿವೆ. ದೇಶದಲ್ಲಿ ಅಳಿದು ಹೋಗಿದ್ದ ಚೀತಾ ಸಂತತಿಯನ್ನು ಮರಳಿ ಸೃಜಿಸಲು ಪ್ರಧಾನಿ ಮೋದಿ ಅವರು ಇಚ್ಛಿಸಿದ್ದು, ನಮೀಬಿಯಾದಿಂದ 5 ಪ್ರಾಣಿಗಳನ್ನು ತರಲಾಗಿದೆ. ಇವುಗಳು ವಿಶ್ವದಲ್ಲಿಯೇ ಅತ್ಯಂತ ವೇಗದ ಪ್ರಾಣಿ ಎಂಬ ಖ್ಯಾತಿ ಹೊಂದಿವೆ. ಗಂಟೆಗೆ 100-120 ಕಿಮೀ ವೇಗದಲ್ಲಿ ಓಡುತ್ತವೆ.
ಮಧ್ಯಪ್ರದೇಶದ ಕೊನೋ ಕಾಡು ಇವುಗಳ ವಾಸಸ್ಥಾನಕ್ಕೆ ಸೂಕ್ತ ಸ್ಥಳವೆಂದು ಭಾವಿಸಿ 5 ಚೀತಾಗಳನ್ನು ಇಲ್ಲಿ ಬಿಡಲು ನಿರ್ಧರಿಸಲಾಗಿದೆ. ಅವುಗಳಲ್ಲಿ ಎರಡನ್ನು ಭಾನುವಾರ ಬಿಡುಗಡೆ ಮಾಡಲಾಗಿದೆ. ಚೀತಾಗಳಿಗೆ ರೇಡಿಯೋ ಕಾಲರ್‌ಗಳನ್ನು ಅಳವಡಿಸಲಾಗಿದೆ. ಉಪಗ್ರಹದ ಮೂಲಕ ನಿಗಾ ಇಡಲಾಗಿದೆ. ಇದಲ್ಲದೇ, ಪ್ರತಿ ಚಿರತೆಯ ಹಿಂದೆ ಒಂದು ಮೀಸಲು ತಂಡ 24 ಗಂಟೆಗಳ ಕಾಲ ಮೇಲ್ವಿಚಾರಣೆ ಮಾಡುತ್ತದೆ.
ಆಶಾ ಚೀತಾಗೆ ಗರ್ಭಪಾತ: ಇನ್ನು ಕ್ವಾರಂಟೈನ್ನಲ್ಲಿರುವ ಹೆಣ್ಣು ಚೀತಾ(ಆಶಾ)ಗೆ ಗರ್ಭಪಾತವಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಒತ್ತಡಕ್ಕೆ ಒಳಗಾದ ಹೆಣ್ಣು ಚೀತಾ ಆಶಾಗೆ ಗರ್ಭಪಾತವಾಗಿದೆ. ಚೀತಾಗಳು 90 ದಿನಗಳಲ್ಲಿ ಮರಿ ಹಾಕುತ್ತವೆ. ಈ ಅವಧಿ ಮುಗಿದರೂ ಆಶಾ ಮರಿ ಹಾಕಿಲ್ಲ. ಇದರಿಂದ ಅದಕ್ಕೆ ಗರ್ಭಪಾತವಾಗಿದೆ ಎಂದು ತಿಳಿಸಿದರು.
ನಮೀಬಿಯಾದಿಂದ ತರುವಾಗಲೇ ಹೆಣ್ಣು ಚೀತಾ ಗರ್ಭ ಧರಿಸಿತ್ತು. ಮರಿ ಹಾಕಿದ ಬಳಿಕ ಅವುಗಳು ಹೊಂದಿಕೊಳ್ಳುವಂತೆ ಅವಕಾಶವಾಗುವಂತೆ ಕ್ವಾರಂಟೈನ್ ಮಾಡಲಾಗಿತ್ತು.
ಓದಿ: ಆಫ್ರಿಕನ್ ಚೀತಾಗಳನ್ನು ಅಭಯಾರಣ್ಯಕ್ಕೆ ಬಿಟ್ಟ ನಮೋ.. ದೇಶದ ಚರಿತ್ರೆಯಲ್ಲಿ ಐತಿಹಾಸಿಕ ದಿನ ಎಂದ ಪಿಎಂ