ಡೆಹ್ರಾಡೂನ್ / ರಿಷಿಕೇಶ: ದೇಶಾದ್ಯಂತ ಕೊರೊನಾ 2ನೇ ಅಲೆ ಕೈ ಮೀರಿ ಹೋಗುತ್ತಿರುವುದರ ನಡುವೆ ಕುಂಭಮೇಳದಲ್ಲಿ ಇಂದು ಭಕ್ತರು ಸಾಂಕೇತಿಕವಾಗಿ ಕೊನೆಯ 'ಶಾಹಿ ಸ್ನಾನ'ವನ್ನು ನೆರವೇರಿಸಿದ್ದಾರೆ. ಬೆಳಗ್ಗೆ ಬ್ರಾಹ್ಮಿ ಮೂಹರ್ತದಿಂದ 10: 45 ರವರೆಗೆ ಸುಮಾರು 670 ಮಂದಿ ಭಕ್ತರು ಸ್ನಾನದಲ್ಲಿ ಪಾಲ್ಗೊಂಡಿದ್ದರು ಎಂಬುದಾಗಿ ತಿಳಿದು ಬಂದಿದೆ.
ವಿವಿಧ ಕಣಿವೆ ಪ್ರದೇಶಗಳಿಂದ ಬಂದಿದ್ದ ಸಾಧು - ಸಂತರು ಪವಿತ್ರ ಸ್ನಾನ ನೆರವೇರಿಸಿದ್ದಾರೆ. ಈ ಹಿಂದೆ ಕುಂಭಮೇಳದಲ್ಲಿ ಭಾಗವಹಿಸಿದ್ದ ಹಲವು ಸಂತರಿಗೆ ಕೊರೊನಾ ದೃಢಪಟ್ಟಿದ್ದರಿಂದ ಅವರು ಹಿಂದಿರುಗಿದ್ದರು. ಕೆಲವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬುದಾಗಿ ತಿಳಿದು ಬಂದಿದೆ.
ಕೋವಿಡ್ ತನ್ನ ಪ್ರಭಾವವನ್ನು ವ್ಯಾಪಕವಾಗಿ ಹರಡಿರುವುದರಿಂದ ಏಪ್ರಿಲ್ 17ರಂದು ಪ್ರಧಾನಿ ನರೇಂದ್ರ ಮೋದಿ ಅವರು ಕುಂಭಮೇಳವನ್ನು ಕೇವಲ ಸಾಂಕೇತಿಕವಾಗಿ ಆಚರಿಸುವಂತೆ ಸಾಧು ಸಂತರಿಗೆ ಮನವಿ ಮಾಡಿದ್ದರು. ಈ ಹಿನ್ನೆಲೆ ಹಲವಾರು ಸಾಧು ಸಂತರು ಇದಕ್ಕೆ ಒಪ್ಪಿಗೆಯನ್ನೂ ಸೂಚಿಸಿದ್ದರು.
ಕೇಂದ್ರ ಆರೋಗ್ಯ ಸಚಿವಾಲಯದ ಪ್ರಕಾರ, ದೇಶದಲ್ಲಿ ದಿನವೊಂದಕ್ಕೆ 3,23,144 ಜನರಿಗೆ ಕೊರೊನಾ ಪಾಸಿಟಿವ್ ಕಂಡುಬರುತ್ತಿದೆ. ಈವರೆಗೆ ಸುಮಾರು 1,76,36,307ಜನರಿಗೆ ಪಾಸಿಟಿವ್ ದೃಢಪಟ್ಟಿದೆ. ಈ ನಡುವೆ ಸೋಂಕಿನಿಂದ ಗುಣಮುಖರಾದವರ ಪ್ರಮಾಣ 82.54ಕ್ಕೆ ತಲುಪಿದೆ ಎಂದು ವರದಿ ಬಿಡುಗಡೆ ಮಾಡಿದೆ.
ಉತ್ತರಾಖಂಡದಲ್ಲಿ ಸೋಮವಾರ 5,058 ಕೋವಿಡ್ -19 ಪ್ರಕರಣಗಳು ದಾಖಲಾಗಿದ್ದು, ಡೆಹ್ರಾಡೂನ್‌ನಲ್ಲಿ 2,034 ಪ್ರಕರಣಗಳು ಮತ್ತು ಹರಿದ್ವಾರ 1,002 ಪ್ರಕರಣಗಳು ದಾಖಲಾಗಿವೆ.
ದೇಶದಲ್ಲಿ ಕೋವಿಡ್ ಪರಿಸ್ಥಿತಿ ಹದಗೆಟ್ಟು ಹಲವಾರು ರಾಜ್ಯಗಳು ಲಾಕ್ಡೌನ್ ಮೊರೆ ಹೋಗಿರುವ ನಡುವೆ ಕುಂಭಮೇಳದಲ್ಲಿ ಸಾಕಷ್ಟು ಜನ ಒಂದೆಡೆ ಸೇರಿರುವುದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.