ಅಸ್ಸೋಂ : ರಾಷ್ಟ್ರಪಿತ ಮಹಾತ್ಮ ಗಾಂಧಿ 1932ರಲ್ಲಿ ಹರಿಜನ ಅಥವಾ ದೇಶದ ದಲಿತರ ಸ್ಥಿತಿಯನ್ನು ಸುಧಾರಿಸುವ ಉದ್ದೇಶದಿಂದ 'ಹರಿಜನ ಸೇವಕ ಸಂಘ' ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. ದೇವಾಲಯಗಳು, ಶಾಲೆಗಳು ಸೇರಿ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಮುಕ್ತ ಪ್ರವೇಶಕ್ಕಾಗಿ ಅವರು ಆಗ್ರಹಿಸಿದರು. ಈ ಮೂಲಕ ದಲಿತರನ್ನು ಮುಖ್ಯ ವಾಹಿನಿಗೆ ತರುವ ಕೆಲಸ ಮಾಡಿದರು. ಇದೇ ವೇಳೆ ಅಸ್ಸೋಂನಲ್ಲಿ ಗಾಂಧೀಜಿಯ ಕರೆಗೆ ಹರಿಜನ ಬಂಧು ಕೃಷ್ಣನಾಥ್ ಶರ್ಮಾ ಅವರು ಚಳವಳಿಯ ನೇತೃತ್ವ ವಹಿಸಿ ದಲಿತ ಪರ ದನಿಗೂಡಿಸಿದರು.
ಹರಿಜನರ ಹಕ್ಕುಗಳಿಗಾಗಿ ಹೋರಾಟ : ಗಾಂಧಿವಾದಿಯಾಗಿದ್ದ ಕೃಷ್ಣನಾಥ್ ಶರ್ಮಾ ಅವರು ಸಾಂಪ್ರದಾಯಿಕ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದರು. ಆದರೆ ದಲಿತ ಚಳವಳಿಗೆ ಧುಮುಕಿದ್ದ ಕಾರಣ ಅವರನ್ನು ಸಮಾಜದಿಂದಲೇ ಹೊರಹಾಕಲಾಯಿತು. ಫೆ. 28, 1887ರಲ್ಲಿ ಅಸ್ಸೋಂನ ಜೋರ್ಹತ್ ಜಿಲ್ಲೆಯ ಸರ್ಬೈಬಂದ್ನಲ್ಲಿ ಜನಿಸಿದ ಶರ್ಮಾ, ಗಾಂಧೀಜಿಯ ದಲಿತ ಚಳವಳಿಯಲ್ಲಿ ಹರಿಜನರ ಹಕ್ಕುಗಳಿಗಾಗಿ ಹೋರಾಟಕ್ಕಿಳಿದರು. ಅರ್ಲ್ ಲಾ ಕಾಲೇಜಿನಲ್ಲಿ ಕಾನೂನು ಪದವಿ ಹಾಗೂ ವಿಜ್ಞಾನ ಪದವಿ ಪಡೆದಿದ್ದರು. ಮುಂದೆ ಕಾನೂನು ಅಭ್ಯಾಸ ಮೊಟಕುಗೊಳಿಸಿ 1921ರ ಗಾಂಧೀಜಿ ಕರೆಕೊಟ್ಟ ಅಸಹಕಾರ ಚಳವಳಿಯಲ್ಲೂ ಭಾಗಿಯಾದರು.
ಅಸಹಕಾರ ಚಳವಳಿಯಲ್ಲಿ ಭಾಗಿ : ಅಸ್ಸೋಂನಿಂದ ಗಾಂಧೀಜಿಯವರ ಅಸಹಕಾರ ಚಳವಳಿಯಲ್ಲಿ ಭಾಗವಹಿಸಿದ ಪ್ರವರ್ತಕರಲ್ಲಿ ಕೃಷ್ಣನಾಥ್ ಶರ್ಮಾ ಸಹ ಒಬ್ಬರು. ಅವರು ಚಹಾ ತೋಟದ ಮಾಲೀಕರ ಶ್ರೀಮಂತ ಕುಟುಂಬಕ್ಕೆ ಸೇರಿದವರು. ಆದಾಗ್ಯೂ, ಅವರು ಆರಂಭಿಸಿದ ಅಸಹಕಾರ ಚಳವಳಿಯಲ್ಲಿ ಭಾಗವಹಿಸಲು ಐಷಾರಾಮಿ ಜೀವನ ತ್ಯಾಗ ಮಾಡಿದರು. ಗಾಂಧೀಜಿ ಸಹ ಬಹಳ ಪ್ರಸಿದ್ಧ ವಕೀಲರಾಗಿದ್ದರು, ಆದರೆ ಚಳವಳಿಗಾಗಿ ಎಲ್ಲವನ್ನೂ ತ್ಯಾಗ ಮಾಡಿದ್ದರು.
ಕೃಷ್ಣನಾಥ್ 1921ರಲ್ಲಿ ಜೋರ್ಹತ್ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಉಸ್ತುವಾರಿಯನ್ನು ವಹಿಸಿಕೊಂಡರು. ಅದೇ ವರ್ಷ ಶರ್ಮಾ ಜೊತೆಗೆ ನವಿನ್ ಚಂದ್ರ ಬೋರ್ಡೊಲಾಯ್, ತರುಣ್ ರಾಮ್ ಫುಕಾನ್ ಮತ್ತು ಕುಲಧರ್ ಚಾಲೀಹಾ ಒಂದು ವರ್ಷ ಜೈಲು ಶಿಕ್ಷೆ ಅನುಭವಿಸಬೇಕಾಯಿತು. ಆ ದಿನಗಳಲ್ಲಿ, ಶರ್ಮಾ ಗಾಂಧೀಜಿಯವರ ಚಿಂತನೆಯಂತೆ ಅನಕ್ಷರತೆ ನಿರ್ಮೂಲನೆ, ಶಾಲಾ -ಕಾಲೇಜುಗಳ ಆರಂಭ, ಆಸ್ಪತ್ರೆಗಳ ಸ್ಥಾಪನೆ, ದೂರದ ಪ್ರದೇಶಗಳಲ್ಲಿ ರಸ್ತೆಗಳ ನಿರ್ಮಾಣ ಮುಂತಾದ ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ಅಸ್ಸೋಂನಲ್ಲಿ ಹಲವಾರು ಚಳವಳಿ ಆರಂಭಿಸಿದ್ದರು.
ಅಸ್ಪೃಶ್ಯತೆ ನಿರ್ಮೂಲನೆಗೂ ಹೋರಾಟ : ಈ ಹೋರಾಟಗಾರ ಅಸ್ಪೃಶ್ಯತೆ ನಿರ್ಮೂಲನೆಗೂ ಹೋರಾಡಿದ್ದಾರೆ. ಸಾಂಪ್ರದಾಯಿಕ ಬ್ರಾಹ್ಮಣ ಕುಟುಂಬದಿಂದ ಬಂದಿರುವ ಶರ್ಮಾ, ಹರಿಜನರನ್ನು ತಮ್ಮ ಮನೆಯಲ್ಲಿರುವ ನಾಮಘರ್ (ಪ್ರಾರ್ಥನಾ ಸ್ಥಳ)ಕ್ಕೆ ಆಹ್ವಾನಿಸಿ ಸಮುದಾಯದ ಕೆಂಗಣ್ಣಿಗೆ ಗುರಿಯಾದರು. ಮಾತ್ರವಲ್ಲದೆ 1934ರಲ್ಲಿ ಗಾಂಧೀಜಿ ಅಸ್ಸೋಂಗೆ ಎರಡನೇ ಬಾರಿ ಭೇಟಿ ನೀಡಿದಾಗ ಹರಿಜರಿಗಾಗಿಯೇ ಸಿದ್ಧವಾಗಿದ್ದ ಪ್ರಾರ್ಥನಾ ಸ್ಥಳವನ್ನು ಉದ್ಘಾಟಿಸಿದರು. ಇದು ಅಸ್ಸೋಂನಲ್ಲಿ ಹೊಸ ಕ್ರಾಂತಿಗೆ ಕಾರಣವಾಯಿತು.
ತಮ್ಮ ಜೀವನದುದ್ದಕ್ಕೂ ಗಾಂಧಿಯ ಸಂದೇಶ ಮತ್ತು ಆದರ್ಶಗಳನ್ನು ಅನುಸರಿಸಿದ್ದ ನೈಜ ಗಾಂಧಿವಾದಿ 1947, ಫೆಬ್ರವರಿ 2ರಂದು ನಿಧನರಾದರು. ಆದರೆ ರಾಜ್ಯದಲ್ಲಿ ಈ ಸಮಾಜ ಸುಧಾರಕರಿಗೆ ಸರಿಯಾದ ಮನ್ನಣೆ ಸಿಗದಿರುವುದು ದುರಂತ.
ಶಿಥಿಲಾವಸ್ಥೆಯಲ್ಲಿದೆ ಸಬರಮತಿ ಆಶ್ರಮ : ಜೋರ್ಹತ್ನಲ್ಲಿ ಕೃಷ್ಣನಾಥ್ ಶರ್ಮಾ ಸ್ಥಾಪಿಸಿದ ಸಬರಮತಿ ಆಶ್ರಮವು ಈಗ ಶಿಥಿಲಾವಸ್ಥೆಯಲ್ಲಿದೆ. ಸ್ಥಳೀಯರು ಮತ್ತು ಸರ್ಕಾರದ ಆಸಕ್ತಿಯ ಕೊರತೆಯಿಂದಾಗಿ ಆಶ್ರಮವು ಈಗ ಕೊನೆಯ ದಿನಗಳನ್ನು ಎಣಿಸುತ್ತಿದೆ. ಅಸ್ಸೋಂನ ಸ್ವಾತಂತ್ರ್ಯಪೂರ್ವ ಯುಗದ ಶ್ರೀಮಂತ ಇತಿಹಾಸ ಹೊಂದಿರುವ ಆಶ್ರಮವನ್ನು ಪುನಃಸ್ಥಾಪಿಸಲು ಸರ್ಕಾರವು ಯಾವುದೇ ಯೋಜನೆಯನ್ನು ಹಾಕಿಕೊಂಡಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಈ ಆಶ್ರಮದ ಆವರಣದಲ್ಲಿ ಕೃಷ್ಣನಾಥ್ ಶರ್ಮಾರ ಸ್ಮಾರಕವು ಸಹ ಶಿಥಿಲಾವಸ್ಥೆ ತಲುಪಿರುವುದು ದುರಂತ.
ಕೃಷ್ಣನಾಥ್ ಶರ್ಮಾರ ಪರಂಪರೆಯನ್ನು ಉಳಿಸಲು ಸರ್ಕಾರ ಅಥವಾ ಸಾರ್ವಜನಿಕರ ಪ್ರಯತ್ನವು ಇಂದು ಅಗತ್ಯವಾಗಿದೆ. ನಮಗಾಗಿ ಪೂರ್ವಜರ ತ್ಯಾಗ ನೆನೆಯಲು ಇದೊಂದೇ ಮಾರ್ಗವಾಗಿದೆ.
ಇದನ್ನೂ ಓದಿ: ಲಾಲಾ ಲಜಪತ್ ರಾಯ್ ಸಾವಿಗೆ ಸೇಡು.. ಬ್ರಿಟಿಷ್ ಅಧಿಕಾರಿಯ ಹತ್ಯೆಗೆ ಶಪಥ ಮಾಡಿದ್ದರು ಭಗತ್ ಸಿಂಗ್..