ಕೊರ್ಬಾ (ಛತ್ತೀಸ್ಗಢ) : ಹಲ್ಲಿಯೊಂದು ಬಾಯಿಯೊಳಗೆ ನುಗ್ಗಿದ ಪರಿಣಾಮ ಎರಡೂವರೆ ವರ್ಷದ ಮಗು ಸಾವನ್ನಪ್ಪಿದ ಘಟನೆ ಛತ್ತೀಸ್ಗಢದ ಕೊರ್ಬಾದಲ್ಲಿ ನಡೆದಿದೆ. ಆದರೆ, ಹಲ್ಲಿಗೆ ಮನುಷ್ಯನನ್ನು ಸಾಯಿಸುವಷ್ಟು ವಿಷ ಇರುವುದಿಲ್ಲ. ಇದಕ್ಕೆ ಬೇರೆಯದೇ ಕಾರಣ ಇರಬೇಕು ಎಂಬುದು ವೈದ್ಯರ ಅನುಮಾನ. ಹಲ್ಲಿ ಕೂಡ ಮಗುವಿನ ಬಾಯಿಯಲ್ಲೇ ಸಾವನ್ನಪ್ಪಿದ್ದು, ಅಚ್ಚರಿ ಉಂಟು ಮಾಡಿದೆ.
ಕೊರ್ಬಾ ಜಿಲ್ಲೆಯ ಸುಮೇಧಾ ನಾಗಿನ್‌ಭಂಥ ಗ್ರಾಮದಲ್ಲಿ ಈ ಅಚ್ಚರಿ ಘಟಿಸಿದೆ. ಮಲಗಿದ್ದ ವೇಳೆ ಮಗುವಿನ ಬಾಯಿಯಲ್ಲಿ ಹಲ್ಲಿ ಇರುವುದನ್ನು ತಾಯಿ ಕಂಡಿದ್ದಾಳೆ. ಕಿರುಚಿದ ಆಕೆ ತಕ್ಷಣವೇ ಅದನ್ನು ಹೊರಗೆಳೆದು ಬಿಸಾಡಿದ್ದಾಳೆ. ಮಗುವನ್ನು ಎಬ್ಬಿಸಲು ಯತ್ನಿಸಿದಾಗ ಅದು ನಿಸ್ತೇಜವಾಗಿತ್ತು. ಅಕ್ಕಪಕ್ಕದವರು ಬಂದು ಕಂಡಾಗ ಮಗು ಸಾವನ್ನಪ್ಪಿದ್ದು ಗೊತ್ತಾಗಿದೆ.
ಕೋಣೆಯಲ್ಲಿ ಮಗುವೊಂದನ್ನೇ ಮಲಗಿಸಲಾಗಿತ್ತು. ತಾಯಿ ಬಂದು ನೋಡಿದಾಗಲೇ ಘಟನೆ ನಡೆದಿದ್ದು ಗೊತ್ತಾಗಿದೆ. ಹಲ್ಲಿ ಮತ್ತು ಮಗು ಇಬ್ಬರೂ ಸಾವನ್ನಪ್ಪಿದ್ದರು. ಮಗುವಿನ ಬಾಯಿಗೆ ಹಲ್ಲಿ ಹೇಗೆ ನುಗ್ಗಿತು ಎಂಬುದು ಯಾರಿಗೂ ತಿಳಿಯದ ಪ್ರಶ್ನೆಯಾಗಿ ಉಳಿದಿದೆ. ಹಲ್ಲಿಯ ವಿಷ ಸೇವಿಸಿ ಮಗು ಸಾವನ್ನಪ್ಪಿದೆಯೇ ಅಥವಾ ಬೇರೆ ಕಾರಣವಿದೆಯೇ ಎಂಬುದು ಜನರಲ್ಲಿನ ಅನುಮಾನವಾಗಿದೆ. ಪೋಷಕರ ಇಲ್ಲದಾಗ ಮಗುವಿಗೆ ಏನಾಯಿತು ಮತ್ತು ಹಲ್ಲಿ ಆತನ ಬಾಯಿಗೆ ಹೇಗೆ ಪ್ರವೇಶಿಸಿತು ಎಂಬ ಪ್ರಶ್ನೆ ಮೂಡಿದೆ.
ಘಟನೆಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಮಗುವಿನ ಬಾಯಿಯೊಳಗೆ ಹಲ್ಲಿ ನುಗ್ಗಿ ಕಚ್ಚಿದ್ದರಿಂದ ಮಗು ಸಾವನ್ನಪ್ಪಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ಊಹಿಸಲಾಗಿದೆ. ಮಗುವಿನ ಮೃತದೇಹವನ್ನು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಗಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ನಂತರ ಸಾವಿಗೆ ನಿಜವಾದ ಕಾರಣ ತಿಳಿಯಲಿದೆ.
ತಜ್ಞರು ಏನಂತಾರೆ?: ಸರ್ಕಾರಿ ಇವಿಪಿಜಿ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಬಲರಾಮ್ ಕುರ್ರೆ ಹೇಳುವಂತೆ, ಹಲ್ಲಿಯ ವಿಷದಿಂದ ಮಗು ಸಾವನ್ನಪ್ಪಿರುವುದನ್ನು ಒಪ್ಪಲಾಗುವುದಿಲ್ಲ. ಹಲ್ಲಿಗೆ ಮನುಷ್ಯನನ್ನು ಕೊಲ್ಲುವಷ್ಟ ವಿಷವಿಲ್ಲ ಎಂದಿದ್ದಾರೆ.
ಹಲ್ಲಿ ಬಾಯಿಯೊಳಗೆ ನುಗ್ಗಿದಾಗ ಉಸಿರಾಟದ ವೇಳೆ ಅದು ಗಂಟಲಲ್ಲಿ ಸಿಲುಕಿ ಉಸಿರಾಟದಿಂದ ಸಾವನ್ನಪ್ಪಿರಬಹುದು. ದೇಶೀಯ ಹಲ್ಲಿಗಳಲ್ಲಿ ಸ್ವಲ್ಪ ಪ್ರಮಾಣದ ವಿಷವಿರುತ್ತದೆ. ಇದು ಸೇವಿಸಿದಾಗ, ಕಚ್ಚಿದಾಗ ಅದರ ವಿಷ ಅನಾರೋಗ್ಯ, ಕಾಲರಾವನ್ನು ಉಂಟುಮಾಡಬಹುದು. ಸಾವನ್ನು ತರುವುದಿಲ್ಲ. ಹೀಗಾಗಿ ಮಗುವಿನ ಸಾವಿಗೆ ನಿಜವಾದ ಕಾರಣವನ್ನು ಪತ್ತೆ ಮಾಡಬೇಕಿದೆ ಎಂದು ಅವರು ಹೇಳಿದ್ದಾರೆ.
ಪ್ರಾಣಿಶಾಸ್ತ್ರಜ್ಞರು ದೇಶೀಯ ಹಲ್ಲಿಗಳು ವಿಷಕಾರಿಯಲ್ಲ, ಅವುಗಳು ಮನುಷ್ಯ ದೇಹ ಸೇರಿದ ಮೇಲೆ ತಕ್ಷಣವೇ ಸಾಯುತ್ತವೆ ಎಂದು ಹೇಳುತ್ತಾರೆ. ಇತ್ತ ಮಗು ಹಲ್ಲಿಯಿಂದಲೇ ಸಾವನ್ನಪ್ಪಿರುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ನಂತರವಷ್ಟೇ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ.
ಇದನ್ನೂ ಓದಿ: ಮೃತದೇಹ ಹೊತ್ತುಕೊಂಡು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ನದಿ ದಾಟಿ ಗ್ರಾಮಸ್ಥರು..!