ಕೊರ್ಬಾ (ಛತ್ತೀಸ್‌ಗಢ): ಛತ್ತೀಸ್‌ಗಢದ ಕೊಯಲಾಂಚಲ್ ಪ್ರದೇಶದಲ್ಲಿ ಕಲ್ಲಿದ್ದಲು ಕಳ್ಳತನದ ವಿಡಿಯೋ ವೈರಲ್ ಆಗ ಬೆನ್ನಲ್ಲೇ ಇದೀಗ ಮತ್ತೊಂದು ಸೆನ್ಸೇಷನಲ್ ವಿಡಿಯೋ ಹೊರಬಿದ್ದಿದೆ. ಹಾಡಹಗಲೇ ಡೀಸೆಲ್ ಕಳ್ಳತನ ಮಾಡಿರುವ ಖದೀಮರು ಯೋಧರ ಮೇಲೆ ಕಾರು ಹರಿಸಲು ಯತ್ನಿಸಿದ್ದಾರೆ. ಇದರಿಂದ ಕೊರ್ಬಾ ಜಿಲ್ಲೆಯಲ್ಲಿ ಇನ್ನೊಂದು ಮಾಫಿಯಾ ಬೆಳಕಿಗೆ ಬಂದಂತೆ ಆಗಿದೆ.
ಈ ವಿಡಿಯೋದಲ್ಲಿ ಕಳ್ಳರು ಹಗಲು ಹೊತ್ತಲ್ಲೇ ಎರಡು ವಾಹನದಲ್ಲಿ ಡೀಸೆಲ್ ಕದ್ದೊಯ್ದುತ್ತಿದ್ದು, ಇಲ್ಲಿನ ಗಣಿ ಕಾವಲಿಗೆ ನಿಯೋಜನೆಗೊಂಡ ಭದ್ರತಾ ಸಿಬ್ಬಂದಿ ತಡೆಯಲು ಯತ್ನಿಸಿದ್ದಾರೆ. ಅಲ್ಲದೇ, ಇದನ್ನು ತಡೆಯಲು ವಾಹನಕ್ಕೆ ಕಲ್ಲು ತೂರಾಟ ಮಾಡಿದ್ದಾರೆ. ಆದರೆ, ಇದಕ್ಕೆ ಅಂಜದ ಖದೀಮರು ಸೈನಿಕರ ಮೇಲೆ ವಾಹನ ಹರಿಸಿ ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ. ಈ ವೇಳೆ, ಕೇಂದ್ರ ಭದ್ರತಾ ಸಿಬ್ಬಂದಿ ಮಣ್ಣಿನ ದಿಬ್ಬದ ಮೇಲೆ ಏರಿ ಕಳ್ಳರಿಂದ ಪ್ರಾಣ ಉಳಿಸಿಕೊಳ್ಳಲು ಯತ್ನಿಸುತ್ತಿರುವುದು ದಾಖಲಾಗಿದೆ.
ಈ ಕಳ್ಳರ ಅಟ್ಟಹಾಸವು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಮೇಲಾಗಿ ಗಣಿ ಪ್ರದೇಶ ಕಾವಲಿಗೆ ಕೋಟ್ಯಂತರ ರೂ. ಖರ್ಚು ಮಾಡಿ ಬಂದೋಬಸ್ತ್ ಒದಗಿಸಲಾಗಿದೆ. ಆದರೂ, ಖದೀಮರು ಯಾವುದೇ ಭಯವಿಲ್ಲದೇ ಹಗಲಿನ ಹೊತ್ತಲ್ಲೇ ಡೀಸೆಲ್ ಕಳ್ಳತನಲ್ಲಿ ತೊಡಗಿರುವುದು ಕಾರ್ಮಿಕ ಮುಖಂಡರ ಆಕ್ರೋಶಕ್ಕೆ ಕಾರಣವಾಗಿದೆ. ಈ ಮಾಫಿಯಾದ ಪ್ರಬಲವಾದ ಕಾಣದ ಕೈಗಳು ಇವೆ ಎಂಬ ಆರೋಪ ಕೇಳಿ ಬಂದಿದೆ. ಇತ್ತ, ಈ ಬಗ್ಗೆ ಯಾವುದೇ ಅಧಿಕಾರಿಗಳು ಸಹ ಪ್ರತಿಕ್ರಿಯೆ ನೀಡಲು ತಯಾರಿಲ್ಲ.
ಇದನ್ನೂ ಓದಿ: ಇದು KGF ಚಾಪ್ಟರ್ 3 ಹಗರಣ.. ಬೃಹತ್ ಕಲ್ಲಿದ್ದಲು ಕಳ್ಳತನದ ವಿಡಿಯೋ ವೈರಲ್!