ಕೊಲ್ಲಂ(ಕೇರಳ): ಗಂಡನ ಮನೆಯವರ ವರದಕ್ಷಿಣೆ ಕಿರುಕುಳದಿಂದ 24 ವರ್ಷದ ವಿವಾಹಿತೆ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೇರಳದ ಕೊಲ್ಲಂನಲ್ಲಿ ನಡೆದಿದೆ. ಅದರ ವಿಚಾರಣೆ ಕೈಗೆತ್ತಿಕೊಂಡಿರುವ ಪೊಲೀಸರಿಗೆ ಇದೀಗ ಮಹತ್ವದ ಪುರಾವೆ ಲಭ್ಯವಾಗಿದೆ ಎಂದು ತಿಳಿದು ಬಂದಿದೆ.
ಪ್ರಕರಣದ ತನಿಖೆ ನಡೆಸುತ್ತಿರುವ ಐಜಿ ಹರ್ಷಿತಾ ಅಟಲೂರಿ, ವಿಸ್ಮಯಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಲವಾದ ಪುರಾವೆಗಳು ಲಭ್ಯವಾಗಿವೆ. ಆದಷ್ಟು ಬೇಗ ಆರೋಪಿಗಳಿಗೆ ಕಠಿಣ ಶಿಕ್ಷೆ ನೀಡಲಾಗುವುದು ಎಂದಿದ್ದಾರೆ. ನಿಲಾಮೆಲ್ನಲ್ಲಿರುವ ವಿಸ್ಮಯಾ ಅವರ ಮನೆಗೆ ಭೇಟಿ ನೀಡಿರುವ ಐಜಿ, ಪ್ರಕರಣದ ತನಿಖೆ ನಡೆಸಲಾಗುತ್ತಿದ್ದು, ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗುವುದು. ಇದರಲ್ಲಿ ಯಾವುದೇ ರೀತಿಯಲ್ಲೂ ರಾಜಿ ಆಗಲ್ಲ ಎಂದು ತಿಳಿಸಿದ್ದಾರೆ.
ಗಂಡನ ಮನೆಯಲ್ಲಿ ವಿಸ್ಮಯಾ ಆತ್ಮಹತ್ಯೆಗೆ ಶರಣಾಗುತ್ತಿದ್ದಂತೆ ಇದೊಂದು ಕೊಲೆ ಎಂದು ಕುಟುಂಬಸ್ಥರು ಗಂಭೀರ ಆರೋಪ ಮಾಡಿದ್ದರು. ಜತೆಗೆ ಗಂಡನ ಮನೆಯವರ ವಿರುದ್ಧ ದೂರು ದಾಖಲು ಮಾಡಿದ್ದರು. ಮೃತ ವಿಸ್ಮಯಾ ಮನೆಗೆ ಮಾಜಿ ಆರೋಗ್ಯ ಸಚಿವೆ ಕೆಕೆ ಶೈಲಜಾ ಸಹ ಭೇಟಿ ನೀಡಿದ್ದು, ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ಇದೊಂದು ಗಂಭೀರ ವಿಷಯವಾಗಿದ್ದು, ಕೇರಳದಲ್ಲಿ ವರದಕ್ಷಿಣೆ ಭೂತ ಹೊಡೆದೋಡಿಸಲು ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕಾಗಿದೆ ಎಂದಿದ್ದಾರೆ.