ಕೋಲ್ಕತ್ತಾ: ಪಶ್ಚಿಮ ಬಂಗಾಳದ ಠಾಕುರ್ಪುಕೂರ್‌ನಲ್ಲಿರುವ ಖಾಸಗಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ 46 ಕೆಜಿ ತೂಕದ ಟ್ಯೂಮರ್ ಗಡ್ಡೆಯನ್ನ ಯಶಸ್ವಿ ಶಸ್ತ್ರಚಿಕಿತ್ಸೆ ಮೂಲಕ ಹೊರ ತೆಗೆಯಲಾಗಿದೆ. ರೋಗಿಯನ್ನು ಬೆಹಾಲಾ ನಿವಾಸಿ ಸುಶ್ಮಿತಾ ದಾಸ್ ಎಂದು ಗುರುತಿಸಲಾಗಿದೆ.
ಕಳೆದ 15 ವರ್ಷಗಳಿಂದ ಸುಶ್ಮಿತಾ ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದರು. ಅವರಿಗೆ ಸರಿಯಾಗಿ ನಡೆಯಲು ಸಾಧ್ಯವಾಗುತ್ತಿರಲಿಲ್ಲ. ಅಷ್ಟೇ ಏಕೆ ಅವರು ತೀವ್ರ ಉಸಿರಾಟದ ಸಮಸ್ಯೆಗೂ ತುತ್ತಾಗಿದ್ದರು. ಕಳೆದ ಏಳು ತಿಂಗಳುಗಳಲ್ಲಿ ಅವರು ಗಂಭೀರ ಸಮಸ್ಯೆಗಳನ್ನು ಎದುರಿಸಿ ಸಾವು- ಬದುಕಿನ ನಡುವೆ ಹೋರಾಟ ನಡೆಸಿದ್ದರು. ಹೀಗಾಗಿ ಅಂತಿಮವಾಗಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಆಸ್ಪತ್ರೆಗೆ ದಾಖಲಿಸಲಾಯಿತು.
ಆಸ್ಪತ್ರೆಯ ಶಸ್ತ್ರಚಿಕಿತ್ಸಾ ಆಂಕೊಲಾಜಿಸ್ಟ್ ಡಾ ಸುಬ್ರತಾ ಶಾ ಅವರ ಮೇಲ್ವಿಚಾರಣೆಯಲ್ಲಿ ಅವರಿಗೆ ಚಿಕಿತ್ಸೆ ಆರಂಭಿಸಲಾಗಿತ್ತು. ನಾವು ಮೊದಲು ರೋಗಿಯನ್ನು ನೋಡಿದಾಗ, ಅವರ ಸ್ಥಿತಿ ತುಂಬಾ ಗಂಭೀರವಾಗಿತ್ತು. ನಾವು ಆರಂಭಿಕ ಚಿಕಿತ್ಸೆ ಪ್ರಾರಂಭಿಸಿದೆವು. ನಂತರ ಅವರಿಗೆ ಚಿಕಿತ್ಸೆ ನೀಡಲೆಂದೇ ಆರು ವೈದ್ಯರ ತಂಡವನ್ನು ರಚಿಸಿದೆವು. ಮೊದಲಿಗೆ CT ಸ್ಕ್ಯಾನ್ ಮಾಡಲು ನಿರ್ಧರಿಸಲಾಯಿತು. ಆದರೆ, ಅದು ತುಂಬಾ ಆಗಿತ್ತು ಎಂದು ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು ವಿವರಣೆ ನೀಡಿದ್ದಾರೆ.
ಸಿಟಿ ಸ್ಕ್ಯಾನ್ ನಂತರ, ನಮಗೆ ಮಹಿಳೆಯ ಹೊಟ್ಟೆಯಲ್ಲಿ ಸುಮಾರು 46 ಕೆಜಿ ತೂಕದ ಗೆಡ್ಡೆ ಇರುವುದು ಗೊತ್ತಾಯಿತು. ರೋಗಿಯ ಸ್ವಂತ ತೂಕ ಸುಮಾರು 50 ಕೆಜಿ ಇತ್ತು. ಆಕೆಯ ಒಟ್ಟು ತೂಕ ಸುಮಾರು 100 ಕೆಜಿ ಇತ್ತು. ಅವರನ್ನು ಹಾಸಿಗೆಯಲ್ಲಿ ಮಲಗಿಸುವುದು ಕೂಡಾ ತುಂಬಾ ಕಷ್ಟಕರವಾಗಿತ್ತು. ಅವರ ಕುಟುಂಬವೂ ಸಹ ಎಲ್ಲ ಸಮಸ್ಯೆಗಳ ಬಗ್ಗೆ ಹೇಳಿದರು. ಎಲ್ಲವನ್ನೂ ಪರಿಗಣಿಸಿ, ಕುಟುಂಬದ ಒಪ್ಪಿಗೆಯೊಂದಿಗೆ, ನಾವು ಅವರಿಗೆ ಶಸ್ತ್ರಚಿಕಿತ್ಸೆ ಮಾಡಲು ನಿರ್ಧರಿಸಿದೆವು ಎಂದು ಡಾ ಶಾ ಹೇಳಿದ್ದಾರೆ
ಎಲ್ಲ ಪರೀಕ್ಷೆಗಳ ನಂತರ ಅವರಿಗೆ ಶಸ್ತ್ರಚಿಕಿತ್ಸೆ ಕೈಗೊಂಡೆವು. ಸುಮಾರು ಎರಡು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ, ಅವರ ಹೊಟ್ಟೆಯಲ್ಲಿದ್ದ 46 ಕೆಜಿಯ ಗಡ್ಡೆಯನ್ನು ತೆಗೆದುಹಾಕಲಾಯಿತು. ಆರು ತಿಂಗಳ ವೀಕ್ಷಣೆ ಮತ್ತು ಆರೈಕೆಯ ನಂತರ ಮಹಿಳೆ ಈಗ ಆರೋಗ್ಯ ಸುಧಾರಿಸಿದೆ. ಅವರು ಈಗ ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ. ಇಂತಹ ಅಪರೂಪದ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಗೆ ಈಗ ನಡೆಯಲೂ ಬರುತ್ತಿದೆ. ಎಂದಿನಂತೆ ಲವಲವಿಕೆಯಿಂದ ಇದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನು ಓದಿ: ದೈಹಿಕ ಸಮಸ್ಯೆಯಿಂದ ತಾಯಂದಿರು ಮಗುವಿಗೆ ಹಾಲುಣಿಸುವುದನ್ನು ಬೇಗ ನಿಲ್ಲಿಸಬಹುದು; ಅಧ್ಯಯನದಲ್ಲಿ ಬಯಲು