ತಿರುವನಂತಪುರಂ: ವಿಧಾನಸಭಾ ಚುನಾವಣೆಯಲ್ಲಿ ಸಿಪಿಐ (ಎಂ) ನೇತೃತ್ವದ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್ (ಎಲ್‌ಡಿಎಫ್) ಕೇರಳದಲ್ಲಿ ಐತಿಹಾಸಿಕ ಗೆಲುವು ಸಾಧಿಸಿದೆ. ಈ ನಡುವೆ ಆರೋಗ್ಯ ಸಚಿವೆ ಕೆ.ಕೆ ಶೈಲಜಾ ಮತ್ತೊಂದು ಸಾಧನೆ ಮಾಡಿದ್ದಾರೆ. ಕಣ್ಣೂರು ಜಿಲ್ಲೆ ಮಾಟನ್ನೂರಿನಿಂದ ಸ್ಪರ್ಧಿಸಿದ್ದ ಇವರು, 140 ಅಭ್ಯರ್ಥಿಗಳ ಪೈಕಿ ಅತೀ ಹೆಚ್ಚು 60,963 ಮತಗಳನ್ನು ಪಡೆದು ಎಲ್ಲರ ಹುಬ್ಬೇರಿಸಿದ್ದಾರೆ.
ಜಾಗತಿಕ ಮನ್ನಣೆ ಪಡೆದ ಟೀಚರ್ :
'ಶೈಲಜಾ ಟೀಚರ್' ಎಂದೇ ಕೇರಳ ಜನತೆಯಿಂದ ಹೆಸರು ಪಡೆದಿರುವ ಕೆ.ಕೆ ಶೈಲಜಾ, 2017-18 ರಲ್ಲಿ ವಕ್ಕರಿಸಿದ ನಿಫಾ ವೈರಸ್ ಮತ್ತು 2019ರ ಕೋವಿಡ್ ಸೇರಿದಂತೆ ಮಾರಣಾಂತಿಕ ಸಾಂಕ್ರಾಮಿಕ ರೋಗಗಳನ್ನು ತನ್ನ ರಾಜ್ಯದಲ್ಲಿ ಸಮರ್ಥವಾಗಿ ನಿರ್ವಹಿಸಿದ ಮಹಿಳೆ. ಇವರ ಕೆಲಸ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಂಸೆಗೆ ಪಾತ್ರವಾಗಿತ್ತು. ಆರೋಗ್ಯ ಕ್ಷೇತ್ರದ ಸಂದಿಗ್ಧ ಪರಿಸ್ಥಿತಿಯಲ್ಲಿ ತನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದು, ಕೇರಳಿಗರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಎಲ್‌ಡಿಎಫ್ ಸ್ಟಾರ್ ಕ್ಯಾಂಪೇನರ್ಗಳ ಪಟ್ಟಿಯಲ್ಲಿ ಶೈಲಜಾ ಟೀಚರ್ ಮುಂಚೂಣಿಯಲ್ಲಿದ್ದರು. ಈ ಎಲ್ಲದರ ಫಲಿತಾಂಶ ಎಂಬಂತಿದೆ ಇವರ ಅಭೂತಪೂರ್ವ ಗೆಲುವು.
ಶಿಕ್ಷಕಿ ಟು ಸಚಿವೆ ಒಂದು ಯಶಸ್ಸಿನ ಕಥೆ: 2004ರಲ್ಲಿ ಸಕ್ರಿಯ ರಾಜಕಾರಣಕ್ಕೆ ಕಾಲಿಡುವ ಮುನ್ನ ಇವರೊಬ್ಬ ಶಾಲಾ ಶಿಕ್ಷಕಿಯಾಗಿದ್ದರು. ಸುಮಾರು 23 ವರ್ಷಗಳ ಕಾಲ ಮಕ್ಕಳಿಗೆ ಪಾಠ ಮಾಡಿದ್ದಾರೆ. ಸಿಪಿಐ (ಎಂ) ನ ಯುವ ವಿಭಾಗವಾದ ಡೆಮಾಕ್ರಟಿಕ್ ಯೂತ್ ಫೆಡರೇಶನ್ ಆಫ್ ಇಂಡಿಯಾ (ಡಿವೈಎಫ್‌ಐ) ಯ ಮಾಜಿ ಸದಸ್ಯೆಯೂ ಆಗಿದ್ದು, ಪಕ್ಷದ ಉನ್ನತ ಸ್ಥಾನಕ್ಕೇರಿ 2016 ರಲ್ಲಿ ಪಿಣರಾಯಿ ವಿಜಯನ್ ನೇತೃತ್ವದ ಎಡರಂಗ ಸರ್ಕಾರದಲ್ಲಿ ಮೊದಲ ಬಾರಿಗೆ ಸಚಿವರಾದರು.
ಮೊದಲ ಪ್ರಯತ್ನದಲ್ಲೇ ಸಚಿವ ಸ್ಥಾನ:
ಮೊದಲ ಬಾರಿಗೆ, ಅಂದರೆ 2016 ರಲ್ಲಿ ಕಣ್ಣೂರು ಜಿಲ್ಲೆ ಕೂತುಪರಂಬದಿಂದ ಚುನಾವಣೆಗೆ ಸ್ಪರ್ಧಿಸಿದ್ದ ಶೈಲಜಾ ಟೀಚರ್, 12,291 ಮತಗಳ ಅಂತರದಿಂದ ಪ್ರತಿಸ್ಪರ್ಧಿ ವಿರುದ್ದ ಗೆದ್ದು ವಿಧಾನಸಭೆ ಪ್ರವೇಶಿಸಿದ್ದರು. ಮೊದಲ ಬಾರಿಗೆ ಸಚಿವ ಸ್ಥಾನವನ್ನೂ ಗಿಟ್ಟಿಸಿಕೊಂಡಿದ್ದರು. ಈ ಬಾರಿ (2021) ಮಾಟನ್ನೂರಿನಿಂದ ಸ್ಪರ್ಧಿಸಿ ಕಳೆದ ಬಾರಿಗಿಂತ 4 ಪಟ್ಟು ಹೆಚ್ಚು ಮತಗಳಿಸಿ ವಿಜಯದ ಪತಾಕೆ ಹಾರಿಸಿದ್ದಾರೆ.
ಜೋಸೆಫ್ ದಾಖಲೆ ಮುರಿದ ಟೀಚರ್:
ಕೇರಳ ವಿಧಾನಸಭಾ ಚುನಾವಣೆಯ ಇತಿಹಾಸದಲ್ಲಿ 2016 ರಲ್ಲಿ ಇಡುಕ್ಕಿ ಜಿಲ್ಲೆಯ ತೊಡುಪುಝ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕೇರಳ ಕಾಂಗ್ರೆಸ್ ನಾಯಕ ಪಿ.ಜೆ ಜೋಸೆಫ್ ಅತೀ ಹೆಚ್ಚು 45,587 ಮತಗಳನ್ನು ಪಡೆದಿದ್ದರು. ಆದರೆ ,ಈ ಬಾರಿಯ ಚುನಾವಣೆಯಲ್ಲಿ ಜೋಸೆಫ್ ದಾಖಲೆಯನ್ನು ಶೈಲಜಾ ಪುಡಿಗಟ್ಟಿದ್ದಾರೆ. ಈ ಬಾರಿ ಕಣ್ಣೂರು ಜಿಲ್ಲೆ ಧರ್ಮಾಡಂನಿಂದ ಸ್ಪರ್ಧಿಸಿದ್ದ ಪಿಣರಾಯಿ ಕೂಡ 50 ಸಾವಿರ ಮತಗಳ ಅಂತರಿಂದ ಜಯಭೇರಿ ಬಾರಿಸಿದ್ದಾರೆ.
ಲೆಫ್ಟ್ ಈಸ್ ರೈಟ್ ಎಂದ ಕೇರಳ ಜನತೆ :
ಈ ಬಾರಿಯ ಚುನಾವಣೆಯಲ್ಲಿ 140 ಸ್ಥಾನಗಳ ಪೈಕಿ 99 ರಲ್ಲಿ ಗೆದ್ದು ಬೀಗಿರುವ ಕಮ್ಯೂನಿಸ್ಟ್ ಪಕ್ಷ ಮತ್ತೆ ದೇವರಲ್ಲಿ ನಾಡಲ್ಲಿ ಹಿಡಿದ ಸಾಧಿಸಿದೆ. ಈ ಮೂಲಕ ಮತ್ತೊಂದು ಬಾರಿ ಸಿಎಂ ಗಾದಿಗೇರಲು ಪಿಣರಾಯಿ ವಿಜಯನ್ ಸಜ್ಜಾಗಿದ್ದಾರೆ.