ಹೈದರಾಬಾದ್: ನಗರದ ಹೊರವಲಯದಲ್ಲಿ ದಾರುಣ ಘಟನೆಯೊಂದು ನಡೆದಿರುವುದು ಬೆಳಕಿಗೆ ಬಂದಿದೆ. ಬಿ.ಫಾರ್ಮಸಿ ವಿದ್ಯಾರ್ಥಿನಿವೋರ್ವಳನ್ನು ಅಪಹರಿಸಿದ ನಾಲ್ವರು ರಾಕ್ಷಸರು ಆಕೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ...
ಕಾಲೇಜ್ ಮುಗಿಸಿಕೊಂಡು ನಿನ್ನೆ ಸಂಜೆ ತನ್ನ ಸೀನಿಯರ್ ಮತ್ತು ಮತ್ತಿಬ್ಬರು ಪ್ರಯಾಣಿಕರು ಜೊತೆ 7 ಸೀಟರ್ ಆಟೋದಲ್ಲಿ ಮನೆಗೆ ತೆರಳುತ್ತಿದ್ದಳು. ಆಕೆಯ ಸೀನಿಯರ್ ಮತ್ತು ಮತ್ತಿಬ್ಬರು ಪ್ರಯಾಣಿಕರು ತಮ್ಮ-ತಮ್ಮ ಸ್ಟಾಪ್ನಲ್ಲಿ ಇಳಿದುಕೊಂಡಿದ್ದಾರೆ. ಬಳಿಕ ಆಟೋದಲ್ಲಿ ಯುವತಿ ಒಂಟಿಯಾಗಿಯೇ ಪ್ರಯಾಣಿಸುತ್ತಿದ್ದಳು.
ಕಿಡ್ನ್ಯಾಪ್ ಮಾಡಿದ ಆಟೋ ಡ್ರೈವರ್...
ಆಟೋದಲ್ಲಿ ಒಂಟಿಯಾಗಿರುವ ಯುವತಿಯನ್ನು ಕಂಡ ಆಟೋ ಡ್ರೈವರ್ ಆಕೆಯನ್ನು ಅಪಹರಿಸಿದ್ದಾನೆ. ಯುವತಿ ಸ್ಟಾಪ್ ಬಂದ್ರೂ ಆಟೋ ನಿಲ್ಲಿಸದೇ ವೇಗವಾಗಿ ಚಲಿಸಿ ಮುನ್ನಡೆದಿದ್ದಾನೆ. ಯಮನ್ಪೇಟ್ ಬಳಿ ಯುವತಿಯನ್ನು ಕರೆದುಕೊಂಡು ಹೋಗಿದ್ದಾನೆ
ಆಟೋಗಾಗಿ ಕಾಯುತ್ತಿದ್ದ ವ್ಯಾನ್...
ಯುವತಿಯನ್ನು ಕರೆದುಕೊಂಡು ಬರುತ್ತಿರುವ ಮಾಹಿತಿ ಆಟೋ ಸಹಚರನೊಬ್ಬನಿಗೆ ಮೊದಲೇ ಗೊತ್ತಿತ್ತು. ಅಲ್ಲಿ ಆಟೋಗಾಗಿ ಆ ವ್ಯಕ್ತಿ ಕಾಯುತ್ತಿದ್ದ. ಆಟೋ ಬಂದ ತಕ್ಷಣ ಆ ಯುವತಿಯನ್ನು ತನ್ನ ವ್ಯಾನ್ನಲ್ಲಿ ಕರೆದುಕೊಂಡು ಹೋಗಿದ್ದಾರೆ. ಬಳಿಕ ಮತ್ತಿಬ್ಬರು ವ್ಯಾನ್ನಲ್ಲಿ ಹತ್ತಿದರು ಎಂದು ಯುವತಿ ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ.
ಪೊಲೀಸರಿಗೆ ಮಗಳ ಕಿಡ್ನ್ಯಾಪ್ ಬಗ್ಗೆ ದೂರು...
ಸಂಜೆ 6.50ರ ಸುಮಾರಿಗೆ ಯುವತಿಯ ಪೋಷಕರು ಮಗಳ ಅಪಹರಣದ ಬಗ್ಗೆ100ಗೆ ಕರೆ ಮಾಡಿ ದೂರು ನೀಡಿದ್ದಾರೆ. ಕೂಡಲೇ ಎಚ್ಚೆತ್ತ ಪೊಲೀಸರು ಯುವತಿಯ ಫೋನ್ ನಂಬರ್ ಟ್ರ್ಯಾಕ್ ಮಾಡಿ ಪತ್ತೆಗಿಳಿದರು. ನೆಟ್ವರ್ಕ್ ಆಧಾರದ ಮೇಲೆ ಘಟ್ಕೇಸರ್ ವ್ಯಾಪ್ತಿಯಲ್ಲಿ ಪೊಲೀಸರು ಪೆಟ್ರೋಲಿಂಗ್ ಶುರು ಮಾಡಿದರು.
ಎಚ್ಚೆತ್ತ ಆರೋಪಿಗಳು...
ಪೊಲೀಸರು ಟ್ರ್ಯಾಕ್ ಮಾಡುತ್ತಿರುವುದು ಆರೋಪಿಗಳಿಗೆ ತಿಳಿದಿತ್ತು. ಕೂಡಲೇ ಅವರು ಯುವತಿಯನ್ನು ಘಟ್ಕೇಸರ್ ವ್ಯಾಪ್ತಿಯ ಹೊರವಲಯದ ಅನೋಜಿ ಗುಡ್ಡದ ಬಳಿ ಕರೆದುಕೊಂಡು ಬಂದಿದ್ದಾರೆ. ಬಳಿಕ ಯುವತಿಯನ್ನು ಅಲ್ಲೇ ಬಿಟ್ಟು ಪರಾರಿಯಾಗಿದ್ದಾರೆ. ಬಳಿಕ ನಾವು ಯುವತಿಯನ್ನು ಪತ್ತೆ ಹಚ್ಚಿದ್ದೇವೆ ಎಂದು ಮಲ್ಕಾಜಿಗಿರಿ ಡಿಸಿಪಿ ರಕ್ಷಿತಾ ಮೂರ್ತಿ ಘಟನೆ ಬಗ್ಗೆ ಮಾಹಿತಿ ನೀಡಿದರು.
ಯುವತಿ ಕಾಲಿಗೆ ಪೆಟ್ಟು...
ಆಕೆಯ ಬಲಗಾಲಿಗೆ ಪೆಟ್ಟಾಗಿದೆ. ಆರೋಪಿಗಳು ಆಕೆಯ ಮೇಲೆ ರಾಡ್ನಿಂದ ಹಲ್ಲೆ ಮಾಡಿದ್ದಾರೆ. ಯುವತಿ ಮೇಲೆ ಅತ್ಯಾಚಾರ ನಡೆದಿದೆಯೋ ಅಥವಾ ಇಲ್ಲವೋ ಎಂಬುದು ವೈದ್ಯಕೀಯ ವರದಿ ಬಳಿಕವೇ ತಿಳಿದು ಬರಲಿದೆ. ವಿದ್ಯಾರ್ಥಿನಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಸಂತ್ರಸ್ತೆ ಪ್ರಾಣಾಪಾಯದಿಂದ ಪಾರಾಗಿದ್ದಾಳೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಆರೋಪಿಗಳ ಪತ್ತೆಗೆ 10 ತಂಡ...
ನಾವು ಈಗಾಗಲೇ ಆರೋಪಿಗಳ ಪತ್ತೆಗೆ ಜಾಲ ಬೀಸಿದ್ದೇವೆ. ಆರೋಪಿಗಳ ಪತ್ತೆಗಾಗಿ 10 ತಂಡವನ್ನು ರಚಿಸಿದ್ದೇವೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದ್ದು, ರಾತ್ರಿಯಿಂದಲೇ ಶೋಧಕಾರ್ಯ ಮುಂದುವರಿದಿದೆ. ಆದಷ್ಟು ಬೇಗ ಆರೋಪಿಗಳನ್ನು ಪತ್ತೆ ಹಚ್ಚುವುದಾಗಿ ಡಿಸಿಪಿ ಹೇಳಿದ್ದಾರೆ.
ಪ್ರಕರಣ ದಾಖಲು...
ಈ ಘಟನೆ ಕುರಿತು ಮಲ್ಕಾಜಿಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕಾರ್ಯಾಚರಣೆಗಿಳಿದಿದ್ದಾರೆ.
ಕಳೆದ ವರ್ಷ ನಡೆದಿದ್ದ ಪಶು ವೈದ್ಯೆ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದೇಶವನ್ನೇ ಬೆಚ್ಚಿಬೀಳಿಸಿತ್ತು. ಬಳಿಕ ಆರೋಪಿಗಳನ್ನು ಬಂಧಿಸಿದ್ದ ಪೊಲೀಸರು ಎನ್ಕೌಂಟರ್ ಮೂಲಕ ಕಾಮುಕರ ಹುಟ್ಟಡಗಿಸಿದ್ದರು. ಆ ಘಟನೆ ಮಾಸುವ ಮುನ್ನವೇ ದುಷ್ಕರ್ಮಿಗಳು ಬಿ.ಫಾರ್ಮಸಿ ವಿದ್ಯಾರ್ಥಿನಿ ಮೇಲೆ ಅಟ್ಟಹಾಸ ಮೆರೆದಿರುವುದು ಮುತ್ತಿನ ನಗರಿಯ ಜನರ ನಿದ್ದೆಗೆಡಿಸಿದೆ.