ಕೇರಳ: ಮಲಂಬಂದರಂ ಸಮುದಾಯಕ್ಕೆ ಸೇರಿದ ಮಹಿಳೆ ಕಾಡಿನಲ್ಲಿ ಮಗುವಿಗೆ ಜನ್ಮ ನೀಡಿದ ಘಟನೆ ಪತ್ತನಂತಿಟ್ಟ ಜಿಲ್ಲೆಯ ಚಲಕಾಯಂ ಕಾಡಿನಲ್ಲಿ ನಡೆದಿದೆ.
ಸರಿಯಾದ ರಸ್ತೆ ವ್ಯವಸ್ಥೆಯಿಲ್ಲದೆ ಆಸ್ಪತ್ರೆಗೆ ತೆರಳಲು ಅಸಾಧ್ಯವಾದ ಕಾರಣ ಗರ್ಭಿಣಿ ಪ್ರಕೃತಿ ಮಡಿಲಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ. ಈ ಘಟನೆ ನಡೆದ ಸ್ಥಳಕ್ಕೆ ವೈದ್ಯಕೀಯ ತಂಡ ಆಗಮಿಸಿ ಮಗು ಮತ್ತು ತಾಯಿಯ ಆರೋಗ್ಯ ಪರೀಕ್ಷೆ ನಡೆಸಿದರು. ಸದ್ಯ ತಾಯಿ, ಮಗು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಇದೇ ರೀತಿಯ ಘಟನೆ ಒಡಿಶಾ ರಾಜ್ಯದಲ್ಲೂ 2020 ಆಗಸ್ಟ್ ತಿಂಗಳಲ್ಲಿ ನಡೆದಿತ್ತು. ಆಸ್ಪತ್ರೆಗೆ ತೆರಳಲು ಸರಿಯಾದ ರಸ್ತೆ ವ್ಯವಸ್ಥೆ ಇಲ್ಲದೆ, ಹಗ್ಗದಿಂದ ಮಾಡಿದ ಸ್ಟ್ರೆಚರ್ನಲ್ಲಿ ಗರ್ಭಿಣಿಯನ್ನು 4 ಕಿ.ಮೀ.ವರೆಗೆ ಯುವಕರು ಹೊತ್ತೊಯ್ದು ಆಸ್ಪತ್ರೆಗೆ ದಾಖಲಿಸಿದ್ದರು.
ರಾಜ್ಯದಲ್ಲಿ ಮೂಲ ಸೌಕರ್ಯಾಭಿವೃದ್ಧಿ ಮಾಡುತ್ತಿದ್ದೇವೆ ಎಂದು ಸರ್ಕಾರಗಳು ಎಷ್ಟೇ ಹೇಳಿಕೊಂಡರೂ ಸಹ ಬುಡಕಟ್ಟು ಜನಾಂಗದ ಪರಿಸ್ಥಿತಿ ಕೆಲವೆಡೆ ತೀರಾ ಶೋಚನೀಯವಾಗಿದೆ ಎನ್ನುವುದಕ್ಕೆ ಇವೆಲ್ಲಾ ನಿದರ್ಶನಗಳು.