ಕಾಸರಗೋಡು: ವಯನಾಡು ಜಿಲ್ಲೆಯ ಪೆರಿಯಾದಲ್ಲಿ ನಡೆದ ಗುಂಡಿನ ಚಕಮಕಿ ಬಳಿಕ ಪರಾರಿಯಾಗಿರುವ ಮೂವರು ಮಹಿಳಾ ಮಾವೋವಾದಿಗಳ ಪತ್ತೆಗೆ ಕೇರಳ ಪೊಲೀಸರು ಕಳೆದ ಒಂದು ವಾರದಿಂದ ತೀವ್ರ ಶೋಧ ನಡೆಸುತ್ತಿದ್ದಾರೆ. ಮಾವೋವಾದಿ ಗುಂಪಿನ ಈ ಮೂವರು ಇತ್ತೀಚೆಗೆ ತಲಶ್ಶೇರಿ ಪ್ರದೇಶಕ್ಕೆ ತಲುಪಿದ್ದಾರೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಇದರ ಹಿನ್ನೆಲೆಯಲ್ಲಿ ಕಣ್ಣೂರು ನಗರ ಪೊಲೀಸರು ಪತ್ತೆಗಾಗಿ ಲುಕ್‌ಔಟ್ ನೋಟಿಸ್ ಜಾರಿ ಮಾಡಿದ್ದಾರೆ.
ದೊರೆತ ಸುಳಿವುಗಳ ಆಧಾರದ ಮೇಲೆ ಉನ್ನತ ಅಧಿಕಾರಿಗಳು, ತಲಶ್ಶೇರಿ ಪ್ರದೇಶಕ್ಕೆ ಹೆಚ್ಚಿನ ಪೊಲೀಸ್ ಭದ್ರತೆಯನ್ನು ನಿಯೋಜಿಸಿದ್ದಾರೆ. ಮಾವೋವಾದಿಗಳು ತಲಶ್ಶೇರಿ ತಲುಪಿದ್ದಾರೆ ಎಂಬುದರ ಕುರಿತು ಪೊಲೀಸರಿಗೆ ಮಾಹಿತಿ ದೊರೆತಿದೆ. ತಕ್ಷಣವೇ ವ್ಯಾಪಕ ಹುಡುಕಾಟ ಪ್ರಾರಂಭಿಸಲಾಯಿತು. ಆದರೆ ಯಾವುದೇ ಕಾರ್ಯಕರ್ತರು ಪತ್ತೆಯಾಗಿಲ್ಲ. ಹುಡುಕಾಟ ಇನ್ನೂ ಮುಂದುವರಿದೆ. ಮಹಿಳಾ ಮಾವೋವಾದಿ ಸುಂದರಿ, ವನಜಾ ಮತ್ತು ಲತಾ ತಲಶ್ಶೇರಿ ತಲುಪಿದ್ದಾರೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಇವರು ಖಾಸಗಿ ಬಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ನಿಲಂಬೂರ್ ಕರುಳಾಯಿ ಅರಣ್ಯದಲ್ಲಿ ಪಡೆಗಳ ಗುಂಡಿಗೆ ಬಲಿಯಾದ ಕುಪ್ಪು ದೇವರಾಜ್ ಮತ್ತು ಅಜಿತಾ ಅವರ ಪುಣ್ಯತಿಥಿಯನ್ನು ಮಾವೋವಾದಿಗಳು ಆಚರಿಸಲು ಯೋಜಿಸುತ್ತಿದ್ದಾರೆ ಎಂದು ಗುಪ್ತಚರ ಮಾಹಿತಿ ಲಭಿಸಿದೆ. ನವೆಂಬರ್ 24 ಅನ್ನು ಸ್ಮರಣಾರ್ಥ ದಿನವನ್ನಾಗಿ ಆಚರಿಸಲು ಯೋಜನೆ ರೂಪಿಸಲಾಗಿದೆ. ಗುಪ್ತಚರ ಮಾಹಿತಿಯ ನಂತರ ಎಟಿಎಸ್ ಮತ್ತು ಥಂಡರ್ ಬೋಲ್ಟ್ ಘಟಕವು ಮಾವೋವಾದಿಗಳನ್ನು ಸೆರೆಹಿಡಿಯಲು ಕಾರ್ಯಾಚರಣೆಯನ್ನು ಯೋಜಿಸಿದೆ. ಕಾಡಿನೊಳಗೆ ಎರಡು ಟೆಂಟ್‌ಗಳು ಪತ್ತೆಯಾಗಿವೆ ಎಂಬ ಮಾಹಿತಿಯೂ ಎಟಿಎಸ್‌ಗೆ ದೊರೆತಿದೆ. ಥಂಡರ್ ಬೋಲ್ಟ್ ಕಮಾಂಡೋಗಳು ಮತ್ತು ಪೊಲೀಸ್ ತಂಡ ಮಾವೋವಾದಿಗಳನ್ನು ಹಿಡಿಯಲು ನಿಖರವಾದ ಪ್ಲ್ಯಾನ್ ಸಿದ್ಧಪಡಿಸಿದೆ.
ಉರುಪುಮಕುಟ್ಟಿಯಲ್ಲಿ ಮಾವೋವಾದಿಗಳು ಅಡಗಿರುವ ಬಗ್ಗೆ ಗುಪ್ತಚರ ದಳಕ್ಕೆ ಸುಳಿವು ಲಭಿಸಿದೆ. ಉರುಪುಂಕುಟ್ಟಿ ಪ್ರದೇಶದ ಆಯಮಕುಡಿ ಕಾಲೊನಿಗೆ ಸಾಗಿಸಲಾಗಿದ್ದ ಅಪಾರ ಪ್ರಮಾಣದ ಮಾಂಸದ ಪತ್ತೆಗೆ ಪೊಲೀಸರು ತನಿಖೆ ನಡೆಸಿದ್ದಾರೆ. ಪಡೆಗಳು ಉರುಪ್ಪುಂಕುಟ್ಟಿ ಪ್ರದೇಶಕ್ಕೆ ಆಗಮಿಸಿವೆ. ಕೇರಳ ಪೊಲೀಸ್ ಇಲಾಖೆಯ ಥಂಡರ್ ಬೋಲ್ಟ್ ಹಾಗೂ ವಿಶೇಷ ಕಾರ್ಯಾಚರಣೆ ಪಡೆಯ ತಂಡವು ಮಾವೋವಾದಿಗಳು ಇರುವಿಕೆಯನ್ನು ಅರಿತು, ಅವರ ಮೇಲೆ ಗುಂಡು ಹಾರಿಸಿದೆ. ಮಾವೋವಾದಿಗಳ ಶಿಬಿರವನ್ನು ಥಂಡರ್ ಬೋಲ್ಟ್ ಪಡೆಗಳು ಸುತ್ತುವರಿದವು. ಈ ಗುಂಡಿನ ದಾಳಿಯಲ್ಲಿ ಕೆಲವು ಮಾವೋವಾದಿಗಳು ಗಾಯಗೊಂಡಿದ್ದಾರೆ ಎಂದು ತಿಳಿದುಬಂದಿದೆ.
ಆದರೆ, ಗಾಯಗೊಂಡವರು ದಟ್ಟವಾದ ಅರಣ್ಯ ಪ್ರದೇಶಕ್ಕೆ ಪಲಾಯನ ಮಾಡುವಲ್ಲಿ ಯಶಸ್ವಿಯಾದರು. ಗಾಯಗೊಂಡಿರುವ ಮಾವೋವಾದಿಗಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಸಾಧ್ಯತೆಗಳಿರುವುದರಿಂದ ತಲಶ್ಶೇರಿ ಮತ್ತು ಕೂತುಪರಂಬ ಪ್ರದೇಶಗಳಲ್ಲಿನ ಆಸ್ಪತ್ರೆಗಳ ಮೇಲೆ ನಿಗಾ ವಹಿಸಲಾಗಿದೆ. ಎರಡು ದಿನಗಳ ಹಿಂದೆ ಕಣ್ಣೂರಿನ ಅಯ್ಯನ್‌ಕುನ್ನು ಎಂಬಲ್ಲಿ ಎನ್‌ಕೌಂಟರ್ ನಂತರ ಕಾಡಿಗೆ ಪರಾರಿಯಾಗಿದ್ದ ಶಂಕಿತ ಮಾವೋವಾದಿಗಳಿಗಾಗಿ ಕರ್ನಾಟಕ ಪೊಲೀಸ್ ನಕ್ಸಲ್ ನಿಗ್ರಹ ದಳ ಮತ್ತು ಕೇರಳ ಅರಣ್ಯಾಧಿಕಾರಿಗಳೊಂದಿಗೆ ಕೇರಳ ಪೊಲೀಸರ ಥಂಡರ್ ಬೋಲ್ಟ್ ಕಮಾಂಡೋಗಳು ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ.
ಇದನ್ನೂ ಓದಿ: ಸಿಲಿಂಡರ್ ಸ್ಫೋಟವಾಗಿ ಹಮ್ಸಫರ್ ರೈಲಿಗೆ ಬೆಂಕಿ: ಮೂರು ಬೋಗಿಗಳು ಸುಟ್ಟು ಕರಕಲು