ತಿರುವನಂತಪುರಂ(ಕೇರಳ): ತಿರುವನಂತಪುರಂ ನಿವಾಸಿ 26 ವರ್ಷದ ಯುವ ವೈದ್ಯೆ ಶಹಾನಾ ಎಂಬಾಕೆಯ ದುರಂತ ಸಾವು ಪ್ರಕರಣದ ತನಿಖೆ ನಡೆಯುತ್ತಿದೆ. ಅನುಮಾನಾಸ್ಪದ ಸಾವಿನ ಹಿನ್ನೆಲೆಯಲ್ಲಿ ಆಪ್ತಸ್ನೇಹಿತ ಡಾ.ಇ.ಎ.ರುವೈಸ್ ಎಂಬಾತನ ವಿರುದ್ಧ ಪ್ರಕರಣ ದಾಖಲಾಗಿದೆ. ಕೇರಳದ ಮೆಡಿಕಲ್ ಕಾಲೇಜು ಠಾಣೆ ಪೊಲೀಸರು, ಗುರುವಾರ ಆರೋಪಿಯನ್ನು ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ಮುಂದುವರೆಸಿದ್ದಾರೆ.
ವೈದ್ಯಕೀಯ ಶಿಕ್ಷಣ ಇಲಾಖೆ ನಿರ್ದೇಶಕರು ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕರಿಗೆ ಶಹಾನಾ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳುವಂತೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ಬುಧವಾರ ಸೂಚನೆ ನೀಡಿದ್ದರು. ಇದೊಂದು ಗಂಭೀರ ವಿಚಾರ. ಯಾವುದೇ ರೀತಿಯಲ್ಲೂ ಒಪ್ಪಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದರು.
ಮೃತ ವೈದ್ಯೆಯ ಸಂಬಂಧಿಕರ ಹೇಳಿಕೆ ಆಧರಿಸಿ ರುವೈಸ್ ವಿರುದ್ಧ ವರದಕ್ಷಿಣೆ ತಡೆಗೆ ಸಂಬಂಧಿಸಿದ ಕಾನೂನುಗಳ ಅಡಿ ಪ್ರಕರಣ ಕೂಡ ದಾಖಲಿಸಲಾಗಿದೆ. ಪ್ರಕರಣ ದಾಖಲಾಗುತ್ತಿದ್ದಂತೆ ಇಂದು ಬೆಳಿಗ್ಗೆ ರುವೈಸ್ ಅವರನ್ನು ವಶಕ್ಕೆ ಪಡೆಯಲಾಗಿದೆ. ವಿಚಾರಣೆಯ ನಂತರ ಆರೋಪಿಯನ್ನು ಇಂದು ವಂಚಿಯೂರು ಎಸಿಜೆಎಂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಕಜಕೂಟಂ ಎಸಿ ಆರ್‌ಡಿ ಪೃಥ್ವಿರಾಜ್ ತಿಳಿಸಿದ್ದಾರೆ.
ಅಪಾರ ಪ್ರಮಾಣದ ಚಿನ್ನ, 15 ಎಕರೆ ಜಮೀನು, ಒಂದು BMW ಕಾರ್‌ಗೆ ಬೇಡಿಕೆ: ಶಹಾನಾ ಮತ್ತು ರುವೈಸ್ ಆತ್ಮೀಯ ಸ್ನೇಹಿತರಾಗಿದ್ದು ಮದುವೆಯಾಗಲು ಯೋಜಿಸಿದ್ದರು. ಮದುವೆಗೆ ಎರಡೂ ಮನೆಯವರು ಒಪ್ಪಿಗೆ ಸೂಚಿಸಿದ್ದರು. ಆದರೆ, ರುವೈಸ್ ಕುಟುಂಬದವರು ವರದಕ್ಷಿಣೆಗಾಗಿ ಭಾರಿ ಮೊತ್ತದ ಬೇಡಿಕೆ ಇಟ್ಟಿದ್ದರು. ಅಪಾರ ಪ್ರಮಾಣದ ಚಿನ್ನ, 15 ಎಕರೆ ಜಮೀನು ಮತ್ತು ಒಂದು BMW ಕಾರ್ ವರದಕ್ಷಿಣೆಯಾಗಿ ನೀಡಬೇಕೆಂದು ಹೇಳಿದ್ದರು. ಈ ಬೇಡಿಕೆಗಳನ್ನು ಈಡೇರಿಸುವಷ್ಟು ಶಕ್ತಿ ನಮಗೆ ಇಲ್ಲವೆಂದಾಗ ಮದುವೆ ರದ್ದುಗೊಳಿಸಿದ್ದಾರೆ ಎಂದು ಶಹಾನಾ ಸಂಬಂಧಿಕರು ದೂರಿನಲ್ಲಿ ತಿಳಿಸಿದ್ದಾರೆ. ಈ ದೂರು ಆಧರಿಸಿ ರುವೈಸ್‌ನನ್ನು ಬಂಧಿಸಲಾಗಿದೆ. ವಿಚಾರಣೆ ನಡೆಸಲಾಗುತ್ತಿದೆ ಎಂದು ಪೃಥ್ವಿರಾಜ್ ಹೇಳಿದ್ದಾರೆ.
'ಎಲ್ಲರಿಗೂ ಹಣ ಬೇಕು, ದೊಡ್ಡ ವಿಷಯವೇ ಹಣ'- ಡೆತ್ ನೋಟ್: ಮದುವೆ ರದ್ದಾಗುತ್ತಿದ್ದಂತೆ ಶಹಾನಾ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಕೋಣೆಯಲ್ಲಿ ಡೆತ್ ನೋಟ್ ಕೂಡ ಪತ್ತೆಯಾಗಿತ್ತು. ಮರಣ ಪತ್ರದಲ್ಲಿ ಯಾರ ವಿರುದ್ಧವೂ ಯಾವುದೇ ಆರೋಪ ಮಾಡದ ವೈದ್ಯೆ ಶಹಾನಾ, "ಎಲ್ಲರಿಗೂ ಹಣ ಬೇಕು, ದೊಡ್ಡ ವಿಷಯವೇ ಹಣ" ಎಂದು ಬರೆದಿದ್ದಾರೆ. ನೇರ ಆರೋಪಗಳಿಲ್ಲೇ ಇದ್ದರೂ, ಆರ್ಥಿಕ ವಿಷಯಗಳನ್ನು ಪ್ರಸ್ತಾಪಿಸಿದ್ದರಿಂದ ಇದೊಂದು ಅಸ್ವಾಭಾವಿಕ ಸಾವೆಂದು ಪರಿಗಣಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲ್ಲಂ ನಿವಾಸಿಯಾಗಿರುವ ರುವೈಸ್ ತಿರುವನಂತಪುರಂ ವೈದ್ಯಕೀಯ ಕಾಲೇಜಿನ ಆರ್ಥೋ ವಿಭಾಗದಲ್ಲಿ ಪಿಜಿ ವೈದ್ಯರಾಗಿದ್ದು ಸದ್ಯ ಅವರನ್ನು ಅಮಾನತುಗೊಳಿಸಲಾಗಿದೆ.
ಇದನ್ನೂ ಓದಿ: ವರದಕ್ಷಿಣೆ ಕಿರುಕುಳ ಆರೋಪ: ರಾಜಿ ಪಂಚಾಯಿತಿ ವೇಳೆ ಎರಡು ಕುಟುಂಬಗಳ ಬಡಿದಾಟ