ಪಾಲಕ್ಕಾಡ್ (ಕೇರಳ): ವ್ಯಕ್ತಿಯೊಬ್ಬರ ಕೊಲೆ ಪ್ರಕರಣದಲ್ಲಿ ಯೆಮೆನ್ನಲ್ಲಿ ಮರಣದಂಡನೆಗೆ ಗುರಿಯಾಗಿರುವ ಕೇರಳದ ನರ್ಸ್ಗೆ ವಿನಾಯಿತಿ ನೀಡಲು ಅಲ್ಲಿನ ಸುಪ್ರೀಂಕೋರ್ಟ್ ನಿರಾಕರಿಸಿದೆ. ಇದಕ್ಕಾಗಿ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿದೆ. ಆಕೆಯ ಕುಟುಂಬಸ್ಥರು ಮುಂದಿನ ಕ್ರಮಕ್ಕೆ ಕೇಂದ್ರ ಸರ್ಕಾರದ ನೆರವು ಕೋರಿದ್ದಾರೆ. ಅಲ್ಲದೇ ಕೊನೆಯಲ್ಲಿ ಆಕೆಯನ್ನು ಕಾಣಲು ಅವಕಾಶ ಮಾಡಿಕೊಡಬೇಕು ಎಂದು ಸರ್ಕಾರವನ್ನು ಕೋರಲಾಗಿದೆ. ಯೆಮೆನ್ ಸರ್ಕಾರದ ಈ ಬಗ್ಗೆ ಚರ್ಚಿಸಲು ಮನವಿ ಮಾಡಿದೆ.
ಪ್ರಕರಣದ ಹಿನ್ನೆಲೆ: ಕೇರಳ ನರ್ಸ್ ನಿಮಿಷಾ ಪ್ರಿಯಾ ಮತ್ತು ಅವರ ಕುಟುಂಬ ಹಲವು ವರ್ಷಗಳಿಂದ ಯೆಮೆನ್‌ನಲ್ಲಿದ್ದರು. ಬಳಿಕ ಕೆಲ ವರ್ಷಗಳ ಹಿಂದೆ ಪತಿ ಮತ್ತು ಮಗಳು ಭಾರತಕ್ಕೆ ಮರಳಿದ್ದರು. ಕೆಲವು ಕೆಲಸ ಕಾರಣ ನಿಮಿಷಾ ಅವರು ಅಲ್ಲಿಯೇ ಉಳಿದುಕೊಂಡಿದ್ದರು. 2015 ರಲ್ಲಿ ಯೆಮನ್ ಪ್ರಜೆ ತಲಾಲ್ ಮೆಹಾದಿ ಅವರೊಂದಿಗೆ ಕ್ಲಿನಿಕ್ ಅನ್ನು ಪ್ರಾರಂಭಿಸಿದ್ದರು. ಬಳಿಕ ಕೆಲ ವ್ಯತ್ಯಾಸದಿಂದಾಗಿ ಪಾಲುದಾರಿಕೆ ತೊರೆದಿದ್ದರು.
ಇದಾದ ಬಳಿಕ ಭಾರತಕ್ಕೆ ಹಿಂದಿರುಗಲು ಪ್ರಿಯಾ ಅವರಿಗೆ ಬೇಕಾಗಿದ್ದ ಪಾಸ್ಪೋರ್ಟ್ ಮತ್ತು ವೀಸಾವನ್ನು ಮೆಹಾದಿ ಅವರು ತಮ್ಮಲ್ಲಿ ಒತ್ತೆಯಿಟ್ಟುಕೊಂಡಿದ್ದರು. ಹೀಗಾಗಿ ಅವರು ದೇಶಕ್ಕೆ ಮರಳಲು ಸಾಧ್ಯವಾಗಿರಲಿಲ್ಲ. ತಲಾಲ್ ಮೆಹಾದಿಯಿಂದ ದಾಖಲೆಗಳನ್ನು ಹಿಂಪಡೆಯುವ ಪ್ರಯತ್ನದಲ್ಲಿ ನರ್ಸ್, 2017 ರಲ್ಲಿ ನಿದ್ರಾ ಚುಚ್ಚುಮದ್ದನ್ನು ಆತನಿಗೆ ಚುಚ್ಚಿದ್ದಳು. ದುರಾದೃಷ್ಟವಶಾತ್ ಆತ ಸಾವನ್ನಪ್ಪಿದ್ದ. ಬಳಿಕ ಯಾರಿಗೂ ಗೊತ್ತಾಗದಂತೆ ಮೃತ ದೇಹವನ್ನು ವಿಲೇವಾರಿ ಮಾಡಲು ಪ್ರಯತ್ನಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದಳು.
ಬಂಧಿಸಿದ ಪೊಲೀಸರು ಜೈಲಿಗಟ್ಟಿದ್ದರು. ಇದಾದ ಬಳಿಕ ವಿಚಾರಣೆಯಲ್ಲಿ ಅಲ್ಲಿನ ಸುಪ್ರೀಂಕೋರ್ಟ್ ನರ್ಸ್ ಪ್ರಿಯಾಗೆ ಕೊಲೆ ಆರೋಪದಲ್ಲಿ ಮರಣದಂಡನೆ ವಿಧಿಸಿತ್ತು. ಇದರ ವಿರುದ್ಧ ಪ್ರಿಯಾ ಅವರು ಅರ್ಜಿ ಸಲ್ಲಿಸಿದ್ದರು.ಕಳೆದ 6 ವರ್ಷಗಳಿಂದ ಅವರು ಯೆಮೆನ್ ಜೈಲಿನಲ್ಲಿದ್ದಾರೆ. ಮರಣದಂಡನೆಯಿಂದ ವಿನಾಯಿತಿ ನೀಡಲು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಅಲ್ಲಿನ ಸುಪ್ರೀಂಕೋರ್ಟ್ ನಿರಾಕರಿಸಿದೆ. ನರ್ಸ್ ಪರ ವಕೀಲರು ಕನಿಷ್ಟ ಅವರ ಕುಟುಂಬದ ಭೇಟಿಗೆ ಅವಕಾಶ ನೀಡಲು ಕೋರ್ಟ್ಗೆ ಮನವಿ ಮಾಡಿದ್ದಾರೆ.
ಕೇಂದ್ರದ ನೆರವು ಕೋರಿದ ಕುಟುಂಬ: ನರ್ಸ್ ಮರಣದಂಡನೆ ವಿನಾಯಿತಿ ತಿರಸ್ಕರಿಸಿದ್ದು ಭೇಟಿಗೆ ಅವಕಾಶ ಮಾಡಿಸಿಕೊಡಿ ಎಂದು ಕುಟುಂಬಸ್ಥರು ಕೇಂದ್ರ ಸರ್ಕಾರದ ನೆರವು ಕೋರಿದ್ದಾರೆ. ಈ ಬಗ್ಗೆ ದೆಹಲಿ ಹೈಕೋರ್ಟ್ ಕೂಡ ಅರ್ಜಿದಾರರ ಬೇಡಿಕೆಯ ಬಗ್ಗೆ ವಾರದೊಳಗೆ ನಿರ್ಧಾರ ತೆಗೆದುಕೊಳ್ಳುವಂತೆ ಕೇಂದ್ರಕ್ಕೆ ಸೂಚಿಸಿದೆ.
ಸುಪ್ರೀಂಕೋರ್ಟ್ ಅರ್ಜಿಯನ್ನು ನಿರಾಕರಿಸಿದ್ದು ಆಘಾತವಾಗಿದೆ ಎಂದು ನರ್ಸ್ ಪ್ರಿಯಾ ಅವರ ತಾಯಿ ಹೇಳಿದ್ದಾರೆ. ಮಗಳನ್ನು ನೋಡಲು ಅವಕಾಶ ಮಾಡಿಕೊಡಬೇಕು. ಯೆಮೆನ್ ಅಧ್ಯಕ್ಷರು ಮಾತ್ರ ಮರಣದಂಡನೆಗೆ ಕ್ಷಮೆ ನೀಡುವ ಕೊನೆಯ ಅವಕಾಶವಿದೆ. ಈ ಬಗ್ಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು. ಈ ಹಿಂದೆ ಸಾವಿಗೀಡಾದ ಮೆಹಾದಿ ಕುಟುಂಬ ಪರಿಹಾರ ನೀಡಿದಲ್ಲಿ ಕೇಸ್ ವಾಪಸ್ ಪಡೆಯುವುದಾಗಿ ತಿಳಿಸಿತ್ತು. ಇದರ ನಂತರ ಅದನ್ನೂ ತಿರಸ್ಕರಿಸಿದೆ.
ಇದನ್ನೂ ಓದಿ: ವಾರ್ಷಿಕ ಮಂಡಲ ಮಕರವಿಳಕ್ಕು ಯಾತ್ರೆ: ಭಕ್ತರಿಗೆ ಬಾಗಿಲು ತೆರೆದ ಶಬರಿಮಲೆ ದೇವಾಲಯ