ಕಣ್ಣೂರು, ಕೇರಳ: ಲಾಟರಿ ಎಂಬುದು ಅದೃಷ್ಟ. ಅದು ಯಾವಾಗ ಕೈಗೆ ಬರುತ್ತೋ ಯಾರಿಗೆ ಗೊತ್ತು. ಇಲ್ಲೊಬ್ಬ ವ್ಯಕ್ತಿ ಬರೋಬ್ಬರಿ 52 ವರ್ಷಗಳಿಂದ ಆ ಒಂದು "ಲಾಟರಿ ಬಂಪರ್"ಗಾಗಿ ಕಾದಿದ್ದಾರೆ. ಇದಕ್ಕಾಗಿ ಇವರು ಈವರೆಗೂ ಖರ್ಚು ಮಾಡಿಕೊಂಡಿದ್ದು 3.5 ಕೋಟಿ ರೂಪಾಯಿ!.
ಲಾಟರಿಗಾಗಿ ಕಾದಿರುವ ಇವರ ಹೆಸರು ರಾಘವನ್. ಕೇರಳದ ಕಣ್ಣೂರಿನ ಕರಿವಲ್ಲೂರು ಗ್ರಾಮದವರು. ಕೃಷಿಕ ಕುಟುಂಬದ ಈತ ದಿನಗೂಲಿ ಮಾಡಿ ಜೀವನ ಸಾಗಿಸುತ್ತಿದ್ದಾರೆ. ರಾಘವನ್ ಅವರು 18 ವರ್ಷ ವಯಸ್ಸಿನವರಾಗಿದ್ದಾಗ ಅಂದರೆ, 1970 ರಿಂದ ಲಾಟರಿ ಟಿಕೆಟ್ ತೆಗೆದುಕೊಳ್ಳಲು ಪ್ರಾರಂಭಿಸಿದ್ದಾರಂತೆ.
ಅಂದಿನಿಂದಲೂ ರಾಘವನ್ ಲಾಟರಿ ಟಿಕೆಟ್‌ಗಳ ಖರೀದಿ ನಿಲ್ಲಿಸಿಲ್ಲ. ಪ್ರತಿದಿನ 10 ಟಿಕೆಟ್‌ಗಳನ್ನು ತೆಗೆದುಕೊಳ್ಳುತ್ತಾರಂತೆ. 52 ವರ್ಷಗಳಿಂದ ಖರೀದಿಸುತ್ತಾ ಬಂದಿರುವ ಎಲ್ಲ ಲಾಟರಿ ಟಿಕೆಟ್‌ಗಳನ್ನು ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ. ಅವುಗಳನ್ನು ಗೋಣಿ ಚೀಲಗಳಲ್ಲಿ ಶೇಖರಿಸಿಟ್ಟಿದ್ದಾರೆ.
ಅರ್ಧಶತಮಾನದಿಂದ ಕೊಳ್ಳುತ್ತಾ ಬಂದಿರುವ ಲಾಟರಿ ಟಿಕೆಟ್‌ಗಳ ಒಟ್ಟು ಮೊತ್ತ ಈಗ 3.5 ಕೋಟಿ ರೂಪಾಯಿ ಆಗಿದೆಯಂತೆ. ರಾಘವನ್ ಈವರೆಗೂ ಪಡೆದ ಗರಿಷ್ಠ ಬಹುಮಾನ ಕೇವಲ 5 ಸಾವಿರ ರೂಪಾಯಿ ಮಾತ್ರ.
ರಾಘವನ್ ಅವರು ಕಷ್ಟಪಟ್ಟು ದುಡಿದ ಹಣವನ್ನು ಲಾಟರಿ ಟಿಕೆಟ್‌ಗಾಗಿ ಖರ್ಚು ಮಾಡುತ್ತಲೇ ಬಂದಿದ್ದಾರೆ. ದಿನಗೂಲಿ ಮಾಡುವ ಅವರು ಅದರಲ್ಲಿಯೇ ಒಂದು ಮೊತ್ತದಲ್ಲಿ ಲಾಟರಿ ಟಿಕೆಟ್ ಪಡೆಯುತ್ತಾರೆ. ಇವರ ಈ ಖಯಾಲಿಗೆ ಮನೆಯವರ ಬೆಂಬಲವೂ ಇದೆಯಂತೆ. ಒಂದಲ್ಲಾ ಒಂದು ಈತ ಬಂಪರ್ ಲಾಟರಿ ಹೊಡೆಯುತ್ತಾರೆ ಎಂಬುದು ಅವರ ನಿರೀಕ್ಷೆಯಂತೆ.
ಮೊನ್ನೆಯಷ್ಟೇ ಓಣಂ ಹಬ್ಬದ ವಿಶೇಷವಾಗಿ ನಡೆಸಲಾದ 25 ಕೋಟಿ ಲಾಟರಿ ಆಟೋ ಡ್ರೈವರ್ ಒಬ್ಬರ ಪಾಲಾಗಿತ್ತು. ಇದು ಕೇರಳದ ಲಾಟರಿ ಇತಿಹಾಸದಲ್ಲಿಯೇ ಅತ್ಯಧಿಕ ಮೊತ್ತವಾಗಿತ್ತು.
ಓದಿ: ₹25 ಕೋಟಿ ಲಾಟರಿ ಗೆದ್ದ ಕೇರಳದ ವ್ಯಕ್ತಿಯ ಕೈ ಸೇರುವುದು 15 ಕೋಟಿ ರೂಪಾಯಿ, 10 ಕೋಟಿ ಟ್ಯಾಕ್ಸ್!