ಕೊಚ್ಚಿ (ಕೇರಳ): ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ್ದ ದೇವಾಲಯ ಪೂಜಾರಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಕೇರಳ ಹೈಕೋರ್ಟ್ ಎತ್ತಿಹಿಡಿಯಿತು. ನಿರಾಶ್ರಿತ ಕುಟುಂಬವೊಂದಕ್ಕೆ ಆಶ್ರಯ ನೀಡಿದ್ದ ಪೂಜಾರಿ ಬಳಿಕ ಅಪ್ರಾಪ್ತೆಯ ಮೇಲೆ ಒಂದು ವರ್ಷಗಳ ಕಾಲ ನಿರಂತರ ಅತ್ಯಾಚಾರ ನಡೆಸಿರುವುದು ತನಿಖೆಯ ವೇಳೆ ಸಾಬೀತಾಗಿತ್ತು.
ಈ ಪ್ರಕರಣ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿಗಳಾದ ನ್ಯಾ.ಕೆ.ವಿನೋದ್ ಚಂದ್ರನ್ ಮತ್ತು ನ್ಯಾ.ಜಿಯಾದ್ ರೆಹಮನ್ ಅವರಿದ್ದ ಪೀಠ, ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದರೂ ಅಪರಾಧಿಗೆ ಪೊಕ್ಸೊ ಕಾಯ್ದೆಯನ್ವಯ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ. ಸಂತ್ರಸ್ತೆಯ ಮೇಲೆ ಅತ್ಯಾಚಾರ ನಡೆದಿರುವುದು ಸಾಕ್ಷಿಗಳಿಂದ ಈಗಾಗಲೇ ಸಾಬೀತಾಗಿದೆ. ಆದರೆ ಆಕೆಯ ವಯಸ್ಸು ಎಷ್ಟೆಂದು ಸಾಬೀತಾಗಿಲ್ಲ ಎಂದಿದ್ದರು.
ಇದಕ್ಕೂ ಮೊದಲು ಪ್ರಕರಣ ಸಂಬಂಧ ಅಧೀನ ನ್ಯಾಯಾಲಯವು ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಈ ತೀರ್ಪು ಪ್ರಶ್ನಿಸಿದ್ದ ಪೂಜಾರಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದ. ಈ ಮೇಲ್ಮನವಿಯ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ಅಧೀನ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಿದೆ.
ಆಕೆಯನ್ನು ಶಾಲೆಯಿಂದ ಆತ ದೂರವಿರಿಸಿದ್ದನು. ಹೀಗಾಗಿ ಆಕೆಯ ವಯಸ್ಸಿನ ಬಗ್ಗೆ ನಿಖರ ದಾಖಲೆಗಳಿಲ್ಲ. ಆದರೆ ಆಕೆಯ ಮೇಲೆ ಪದೇ ಪದೇ ಆತ ಅತ್ಯಾಚಾರ ನಡೆಸಿದ್ದಾನೆ ಎಂಬುದಕ್ಕೆ ಪುರಾವೆಗಳಿವೆ. ಆದ್ದರಿಂದ ಆತನಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ ಎಂದು ತೀರ್ಪಿನಲ್ಲಿ ತಿಳಿಸಿದೆ.
ಮಲಪ್ಪುರಂ ಮೂಲದ ಪೂಜಾರಿಯೊಬ್ಬ ಮಹಿಳೆ ಸೇರಿ ಆಕೆಯ ಮೂವರು ಮಕ್ಕಳಿಗೆ ಆಶ್ರಯ ನೀಡಿದ್ದಾನೆ. ಆ ಬಳಿಕ ಆಕೆಯ ಹಿರಿಮಗಳ ಮೇಲೆ ನಿರಂತರ ಅತ್ಯಾಚಾರ ನಡೆಸಿದ್ದಾನೆ. ಮಲಪ್ಪುರಂನಲ್ಲಿ ಮಹಿಳೆಯೊಬ್ಬರು ತನ್ನ ಮೂವರು ಮಕ್ಕಳೊಂದಿಗೆ ರಸ್ತೆಯಲ್ಲಿ ಕೆಲವು ದಿನಗಳಿಂದ ಓಡಾಡುತ್ತಿದ್ದಾರೆ ಎಂದು ಮಹಿಳಾ ಸಹಾಯವಾಣಿಗೆ ಬಂದ ಕರೆಯಿಂದಾಗಿ ಇಡೀ ಪ್ರಕರಣ ಬೆಳಕಿಗೆ ಬಂದಿತ್ತು.
ಪೊಲೀಸರು ಆ ಮಹಿಳೆಯ ಸಂಪರ್ಕಿಸಿದಾಗ ಆಕೆ ಮಾನಸಿಕ ಸ್ಥಿಮಿತ ಕಳೆದುಕೊಂಡ ಲಕ್ಷಣ ಕಂಡುಬಂದಿತ್ತು. ತಕ್ಷಣ ಆಕೆಯನ್ನು ಸಾಂತ್ವನ ಕೇಂದ್ರಕ್ಕೆ ಸೇರಿಸಲಾಗಿತ್ತು. ಬಳಿಕ ಆಕೆಯ ಮಕ್ಕಳ ವಿಚಾರಣೆ ನಡೆಸಿದ್ದಾಗ ಅತ್ಯಾಚಾರ ನಡೆದಿರುವುದು ಗೊತ್ತಗಿದೆ.
ಇದನ್ನೂ ಓದಿ: ಕೊಳವೆಬಾವಿಯಿಂದ ಬರುವ ನೀರಿನಲ್ಲಿ ಸೀಮೆಎಣ್ಣೆ ವಾಸನೆ ಪತ್ತೆ ; ಸಂಕಷ್ಟದಲ್ಲಿ ಗ್ರಾಮವಾಸಿಗಳು