ತಿರುವನಂತಪುರ: ಕೇರಳ ಹಣಕಾಸು ಸಚಿವ ಕೆ.ಎನ್.ಬಾಲಗೋಪಾಲ ದೇಶದ ಏಕತೆಗೆ ಭಂಗ ತರುವ ಹೇಳಿಕೆ ನೀಡಿದ್ದು, ಅವರ ವಿರುದ್ಧ ಸಂವಿಧಾನದ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಮುಖ್ಯಮಂತ್ರಿ ಪಿಣರಾಯಿ ವಿಜಯನ್ಗೆ ಪತ್ರ ಬರೆದಿದ್ದಾರೆ. ಆದರೆ ಮುಖ್ಯಮಂತ್ರಿಗಳು ರಾಜ್ಯಪಾಲರ ನಿರ್ದೇಶನವನ್ನು ತಳ್ಳಿಹಾಕಿದ್ದಾರೆ.
ಸಚಿವ ಬಾಲಗೋಪಾಲ ಮೇಲೆ ತಮ್ಮ ವಿಶ್ವಾಸ ಅಬಾಧಿತವಾಗಿದೆ ಎಂದು ಹೇಳಿ ಮುಖ್ಯಮಂತ್ರಿ ವಿಜಯನ್ ರಾಜ್ಯಪಾಲರಿಗೆ ತಿರುಗಿ ಪತ್ರ ಬರೆದಿದ್ದಾರೆ. ತಮ್ಮ ಪತ್ರದಲ್ಲಿ ರಾಜ್ಯಪಾಲರು ಬಾಲಗೋಪಾಲ್ ಅವರನ್ನು ಎಲ್‌ಡಿಎಫ್ ಕ್ಯಾಬಿನೆಟ್‌ನಿಂದ ತೆಗೆದುಹಾಕುವಂತೆ ಅಥವಾ ವಜಾ ಮಾಡುವಂತೆ ಸ್ಪಷ್ಟವಾಗಿ ಹೇಳಿಲ್ಲ. ಆದರೂ ಅವರ ಪತ್ರದ ಸಾರ ಇದೇ ಆಗಿರುವಂತೆ ಕಾಣಿಸುತ್ತದೆ.
ಅಕ್ಟೋಬರ್ 18 ರಂದು ಇಲ್ಲಿನ ವಿಶ್ವವಿದ್ಯಾನಿಲಯದ ಆವರಣದಲ್ಲಿ ಬಾಲಗೋಪಾಲ್ ಅವರು ಪ್ರಾದೇಶಿಕತೆ ಮತ್ತು ಪ್ರಾಂತೀಯತೆಯ ಬೆಂಕಿಯನ್ನು ಹೊತ್ತಿಸಲು ಮತ್ತು ಭಾರತದ ಏಕತೆಯನ್ನು ಹಾಳುಮಾಡುವ ಉದ್ದೇಶದಿಂದ ಭಾಷಣ ಮಾಡಿದ್ದಾರೆ ಎಂದು ಸಿಎಂಗೆ ಬರೆದ ಪತ್ರದಲ್ಲಿ ರಾಜ್ಯಪಾಲರು ಆರೋಪಿಸಿದ್ದಾರೆ. ಹೀಗಾಗಿ ಸಚಿವರು ತಾವು ಹೊಂದಿರುವ ಸ್ಥಾನಮಾನವನ್ನು ತ್ಯಜಿಸುವಂತೆ ಸೂಚಿಸುವುದನ್ನು ಬಿಟ್ಟು ಬೇರೆ ದಾರಿ ತಮ್ಮ ಬಳಿ ಇಲ್ಲ ಎಂದು ರಾಜ್ಯಪಾಲರು ಹೇಳಿದ್ದಾರೆ.
ಇದನ್ನೂ ಓದಿ: ಕೇರಳದಲ್ಲಿ 'ಚಿನ್ನ'ದ ಫೈಟ್: ಪಿಣರಾಯಿ ವಿರುದ್ಧ ಸ್ವಪ್ನಾ ಸಾಕ್ಷ್ಯ ಬೆದರಿಕೆ, ರಾಜೀನಾಮೆಗೆ ಬಿಜೆಪಿ ಪ್ರತಿಭಟನೆ