ತಿರುವನಂತಪುರಂ (ಕೇರಳ): ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮೇಲೆ ಮಾಡಿದ ಗಂಭೀರ ಆರೋಪಗಳ ಬೆನ್ನಲ್ಲೇ ಈಗ ಸಿಪಿಐಎಂನ ಇಬ್ಬರು ಮುಖಂಡರಿಗೆ ಕಂಟಕ ಎದುರಾಗಿದೆ. ಮಾಜಿ ಸ್ಪೀಕರ್ ಪಿ.ಶ್ರೀರಾಮಕೃಷ್ಣನ್ ಮತ್ತು ಮಾಜಿ ರಾಜ್ಯ ಸಚಿವ ಹಾಗೂ ಹಿರಿಯ ಶಾಸಕ ಕೆ.ಟಿ.ಜಲೀಲ್ ಇಕ್ಕಟ್ಟಿಗೆ ಸಿಲುಕಿದ್ದಾರೆ.
ನಿನ್ನೆ ಸ್ವಪ್ನಾ ಸುರೇಶ್ ಅಫಿಡವಿಟ್ ಸಲ್ಲಿಸಿದ್ದು, ಅದರಲ್ಲಿ ಈ ಇಬ್ಬರ ಹೆಸರು ಉಲ್ಲೇಖಿಸಿದ್ದಾರೆ. ತಮ್ಮ ಮಗಳ ಪರವಾಗಿ ಕೆಲಸ ಮಾಡಲು ಸಿಎಂ ತಮ್ಮ ಕಚೇರಿಯನ್ನು ದುರುಪಯೋಗ ಮಾಡಿಕೊಂಡು ಶಾರ್ಜಾದ ಆಡಳಿತಗಾರನ ಜೊತೆ ಚರ್ಚಿಸಿದ್ದಾರೆ. ನಂತರ ಶ್ರೀರಾಮಕೃಷ್ಣನ್ ಅವರೂ ಸಹ ಬಂದು ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಲು ಸಹಾಯ ಕೋರಿದ್ದರು ಎಂದು ತಿಳಿಸಿದ್ದಾರೆ.
ಶಾರ್ಜಾ ಆಡಳಿತಗಾರರ ಮೇಲೆ ಪ್ರಭಾವ ಬೀರಲು ಯುಎಇ ಕಾನ್ಸುಲ್ ಜನರಲ್‌ಗೆ ಹಣದ ಚೀಲವನ್ನು ಅಂದಿನ ಕಾನ್ಸುಲೇಟ್ ಕಚೇರಿಯ ಉದ್ಯೋಗಿ ಪಿ.ಎಸ್.ಸರಿತ್ ನೀಡಿದ್ದರು. ತಾನು ಹೇಳಿದ ವ್ಯಕ್ತಿಗೆ ಹಣ ನೀಡಿ ಸರಿತ್ ಬ್ಯಾಗ್ ತೆಗೆದುಕೊಂಡಿದ್ದರು. ನಂತರ ಅದನ್ನು ಕಸ್ಟಮ್ಸ್ ವಶಪಡಿಸಿಕೊಂಡಿದೆ ಎಂದು ಅಫಿಡವಿಟ್‌ನಲ್ಲಿ ಉಲ್ಲೇಖಿಸಿದ್ದಾರೆ.
ಜಲೀಲ್‌ಗೆ ಮುಂಬೈನಲ್ಲಿ ಬೇನಾಮಿ ಆಸ್ತಿ ಇದೆ. ಅದರ ಮೂಲಕ ಅವರ ಎಲ್ಲಾ ವ್ಯವಹಾರಗಳನ್ನು ನಡೆಸಲಾಗುತ್ತದೆ. ಜುಲೈ 2020ರಲ್ಲಿ ಚಿನ್ನದ ಕಳ್ಳಸಾಗಣೆ ಪ್ರಕರಣವು ಬೆಳಕಿಗೆ ಬಂದ ಕೂಡಲೇ, ಆಗ ಕೇರಳ ವಿಧಾನಸಭೆಯ ಸ್ಪೀಕರ್ ಆಗಿದ್ದ ಶ್ರೀರಾಮಕೃಷ್ಣನ್ ಮತ್ತು ಜಲೀಲ್ ಇಬ್ಬರನ್ನೂ ರಾಷ್ಟ್ರೀಯ ತನಿಖಾ ದಳಗಳು ಪ್ರಶ್ನಿಸಿದ್ದವು.
ಇದನ್ನೂ ಓದಿ: ರಾಹುಲ್ ಗಾಂಧಿಗೆ ಇಡಿ ಡ್ರಿಲ್: ವಿಕೋಪಕ್ಕೆ ತಿರುಗಿ ಪಂಜಾಬ್ ಕಾಂಗ್ರೆಸ್ ಪ್ರತಿಭಟನೆ, ಕಾರ್ಯಕರ್ತರ ಮೇಲೆ ಜಲಫಿರಂಗಿ ಪ್ರಯೋಗ!