ಎರ್ನಾಕುಲಂ (ಕೇರಳ): ಕೊಚ್ಚಿಯ ಕಲೂರ್ ಕ್ರೀಡಾಂಗಣದಲ್ಲಿ ಬೆಳಗಿನ ಜಾವ ವಾಕಿಂಗ್‌ಗೆ ಬರುವ ಜನರಿಗೆ ಸಂಗೀತಾ ಚಿನ್ನ ಮುತ್ತು ಎಂಬಾಕೆ ಚಹಾ ಮಾರಾಟ ಮಾಡುತ್ತಾಳೆ. ಆದರೆ, ಈಕೆ ಈ ರೀತಿ ಚಹಾ ಮಾರಾಟ ಮಾಡಲು ಕಾರಣವೇ ಅತ್ಯಂತ ಆಸಕ್ತಿದಾಯಕವಾಗಿದೆ. ಆಕೆಯ ಐಎಎಸ್ ಅಧಿಕಾರಿಯಾಗುವ ಕನಸು ನನಸು ಮಾಡಿಕೊಳ್ಳಲು ಅವಳು ಈ ದಾರಿ ಕಂಡುಕೊಂಡಿದ್ದಾಳೆ.
ಸೇಂಟ್ ತೆರೇಸಾ ಕಾಲೇಜಿನಲ್ಲಿ ಬಿ.ಕಾಂ ಪದವಿ ಪಡೆದ ಸಂಗೀತಾ ಮಾರ್ಚ್ 2020 ರಿಂದ ಚಹಾ ಮಾರಾಟ ಮಾಡುತ್ತಿದ್ದಾಳೆ. ಇದರ ಜೊತೆಗೆ ತನ್ನ ಬಿಡುವಿನ ವೇಳೆಯಲ್ಲಿ ಐಎಎಸ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಳೆ. ಇನ್ನು ಈಕೆಯ ತಂದೆ ಇಸ್ತ್ರಿ ಮಾಡುವ ಸಣ್ಣ ಅಂಗಡಿ ಇಟ್ಟುಕೊಂಡಿದ್ದಾರೆ. ಆದರೆ, ತಂದೆಯ ದುಡಿಮೆ ತನ್ನ ವಿದ್ಯಾಭ್ಯಾಸಕ್ಕೆ ಸಾಕಾಗುವುದಿಲ್ಲ ಎಂದು ಭಾವಿಸಿ ಚಹಾ ಮತ್ತು ಮನೆಯಲ್ಲಿ ತಯಾರಿಸುವ ವಿಶೇಷ ತಿಂಡಿಗಳನ್ನು ಮಾರಾಟ ಮಾಡಲು ಮುಂದಾಗಿದ್ದಾಳೆ.
ಕನಸು ನನಸಾದಾಗ...
ಸಂಗೀತಾ ಶ್ರಮವಹಿಸಿ ದೃಢಸಂಕಲ್ಪ ಮಾಡಿದ್ದರ ಫಲವಾಗಿ ಇದೀಗ ಆಕೆ ಶೀಘ್ರದಲ್ಲೇ ತ್ರಿಶೂರಿನಲ್ಲಿ ನಾಗರಿಕ ಸೇವಾ ಪರೀಕ್ಷಾ ತರಬೇತಿ ಕೇಂದ್ರಕ್ಕೆ ಸೇರಲು ಸನ್ನದ್ಧಳಾಗಿದ್ದಾಳೆ. ಸಂಗೀತಾ ಬಗ್ಗೆ ಮಾಧ್ಯಮಗಳು ಸುದ್ದಿ ಪ್ರಸಾರ ಮಾಡಿದ ಬಳಿಕ ಜಿಲ್ಲಾಧಿಕಾರಿ ಜಾಫರ್ ಮಲಿಕ್, ಆಕೆಯ ಸಣ್ಣ ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ, ವಿದ್ಯಾರ್ಥಿನಿಯೊಂದಿಗೆ ಸಮಾಲೋಚನೆ ಮಾಡಿದ್ದಾರೆ.
ಈ ಸಂದರ್ಭದಲ್ಲಿ ವಿದ್ಯಾಭ್ಯಾಸಕ್ಕೆ ನೆರವು ನೀಡುವುದಾಗಿ ಭರವಸೆಯನ್ನೂ ಸಹ ನೀಡಿದ್ದಾರೆ. ಅಷ್ಟೇ ಅಲ್ಲದೆ, ಹೆಲೆನ್ ಕೆಲೆರ್ ಬರೆದ 'ಸ್ಟೋರಿ ಆಫ್ ಮೈ ಲೈಫ್' ಪುಸ್ತಕವನ್ನು ಉಡುಗೊರೆಯಾಗಿ ನೀಡಿ ಆಕೆಯ ಓದಿನ ಆಸಕ್ತಿಗೆ ಶಹಬ್ಬಾಸ್ ಹೇಳಿದ್ದಾರೆ. ಬಳಿಕ ಸಂಗೀತಾ ತಂದೆ ಚಿನ್ನಮುತ್ತು ಮತ್ತು ತಾಯಿ ಸಂಕಿಲಿ ಅಮ್ಮಾಳ್ ಜೊತೆಗೆ ಮಾತುಕತೆ ನಡೆಸಿ, ಓದಿನ ಹಂಬಲಕ್ಕೆ ಮತ್ತಷ್ಟು ಸಹಕಾರ ನೀಡಿದ್ದಾರೆ.