ಎರ್ನಾಕುಲಂ(ಕೇರಳ): ಜೀವನ ಅರಸಿ ನೆದರ್ಲ್ಯಾಂಡ್ಸ್ಗೆ ತೆರಳಿದ್ದ ಕೇರಳದ ದಂಪತಿ ಅಲ್ಲಿರುವ ಕೊರತೆಯನ್ನೇ ಬಳಸಿಕೊಂಡು ಉದ್ಯಮ ಆರಂಭಿಸಿ ಯಶಸ್ವಿಯಾಗಿದ್ದಾರೆ. ಕೆಲಸ ಕೇಳಿ ಹೋಗಿದ್ದ ಅವರೇ ಇಂದು ಹಲವರಿಗೆ ಉದ್ಯೋಗದಾತರಾಗಿದ್ದಾರೆ.
ಹೌದು, ಕೇರಳದ ರಮ್ಯಾ ಮತ್ತು ನವೀನ್ ಎಂಜಿನಿಯರ್ ದಂಪತಿ 11 ವರ್ಷಗಳ ಹಿಂದೆ ನೆದರ್ಲ್ಯಾಂಡ್ಸ್ಗೆ ತೆರಳಿದ್ದರು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಇವರಿಗೆ ಅಲ್ಲಿನ ಆಹಾರ ಪದ್ಧತಿ ಒಗ್ಗಿರಲಿಲ್ಲ. ದಕ್ಷಿಣ ಭಾರತದಲ್ಲಿ ಫೇಮಸ್ ತಿಂಡಿಯಾದ ಇಡ್ಲಿ, ಗರಿಗರಿ ದೋಸೆ ದಂಪತಿ ಉಳಿದುಕೊಂಡಿದ್ದ ಪ್ರದೇಶದಲ್ಲಿ ಲಭ್ಯವಿರಲಿಲ್ಲ.
ಡಚ್ ನಾಡಿನಲ್ಲಿ ಭಾರತದ ರುಚಿಕರ ತಿಂಡಿ ಅಲಭ್ಯತೆಯನ್ನು ಅರಿತ ರಮ್ಯಾ ಅವರು ತಾವೇ ಉದ್ಯಮವನ್ನು ಆರಂಭಿಸುವ ಐಡಿಯಾ ಮಾಡಿದ್ದಾರೆ. ಅದರಂತೆ "ಮದರ್ಸ್ ಕಿಚನ್" ಎಂಬ ಸಣ್ಣ ಕಂಪನಿ ಆರಂಭಿಸಿದರು. ಆರಂಭದಲ್ಲಿ 10 ಕೆಜಿ ದೋಸೆ ಹಿಟ್ಟನ್ನು ರುಬ್ಬಿ ಅಲ್ಲಿನ ಹೋಟೆಲ್ಗಳಿಗೆ ನೀಡಿದರು.
ಬಳಿಕ ಬೇಡಿಕೆಗೆ ಅನುಗುಣವಾಗಿ ಈ ಪ್ರಮಾಣವನ್ನು ಹೆಚ್ಚಿಸುತ್ತಾ ಸಾಗಿ ಈಗ 500 ಕೆಜಿ ಹಿಟ್ಟು ರುಬ್ಬಿ ಸೂಪರ್ಮಾರ್ಕೆಟ್ಗಳಿಗೂ ಅದನ್ನು ಮಾರಾಟ ಮಾಡುತ್ತಿದ್ದಾರೆ. ಮೊದಲು ದಂಪತಿ ಮಾತ್ರವೇ ಆರಂಭಿಸಿದ್ದ ಕಂಪನಿ ಇದೀಗ ದೊಡ್ಡದಾಗಿ ಬೆಳೆದು ಹಲವು ಜನರಿಗೆ ಉದ್ಯೋಗ ನೀಡಿದೆ. ರುಬ್ಬಿದ ಹಿಟ್ಟಿಗಾಗಿ ಹೆಚ್ಚಿನ ಪ್ರಮಾಣದ ಬೇಡಿಕೆ ಬಂದ ಹಿನ್ನೆಲೆಯಲ್ಲಿ ದೊಡ್ಡ ಯಂತ್ರಗಳನ್ನು ಖರೀದಿಸಿದ್ದಾರೆ.
ಎಂಜಿನಿಯರ್ ಕೆಲಸ ತೊರೆದ ದಂಪತಿ: ಎಂಜಿನಿಯರ್ ಆಗಿದ್ದ ರಮ್ಯಾ ಮತ್ತು ನವೀನ್ ಅವರು ತಮ್ಮ ಈ ಉದ್ಯಮಕ್ಕಾಗಿ ಕೆಲಸವನ್ನೇ ತೊರೆದರು. ಮೊದ ಮೊದಲು ರಮ್ಯಾ ಅವರು ಮಾತ್ರ ಇದನ್ನು ನಡೆಸಿಕೊಂಡು ಹೋಗುತ್ತಿದ್ದರು. ಉದ್ಯಮ ವಿಸ್ತರಣೆಗೊಂಡ ಬಳಿಕ ನವೀನ್ ಅವರೂ ಕೂಡ ಕೆಲಸ ತೊರೆದು ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡರು. ಡಚ್ ದೇಶದಲ್ಲಿ ಆರಂಭಿಸಿದ ಈ ಉದ್ಯಮವನ್ನು ದಂಪತಿ ಕೇರಳದಲ್ಲೂ ಮುಂದುವರಿಸಲು ಯೋಚಿಸಿದ್ದಾಗಿ ತಿಳಿಸಿದ್ದಾರೆ.
ಓದಿ: ರೋಬೋಗಳಿಂದ ಈ ಪಕ್ಷದ ಅಭ್ಯರ್ಥಿಯಿಂದ ಮತಯಾಚನೆ.. ಗುಜರಾತ್ ಚುನಾವಣೆಯಲ್ಲಿ ತಂತ್ರಜ್ಞಾನ ಬಳಕೆ