ತಿರುವನಂತಪುರಂ(ಕೇರಳ): ಹೆಸರೇ ಲಾಟರಿ! ಯಾವಾಗ ಯಾರಿಗೆ ಲಕ್ ಖುಲಾಯಿಸುತ್ತೆ ಅಂತ ಹೇಳಲಾಗದು. ಅಂತೆಯೇ ಕೇರಳದ ಓರ್ವ ಸಾಮಾನ್ಯ ವ್ಯಕ್ತಿ ಅನೂಪ್ ಎಂಬುವವರ ನಸೀಬು ಬದಲಾಗಿದೆ. ಲಾಟರಿ ಖರೀದಿಸುವ ಹವ್ಯಾಸ ಹೊಂದಿದ್ದ ಇವರು ದಿಢೀರ್ ಕೋಟ್ಯಧೀಶರಾಗಿದ್ದಾರೆ. ಅದು ಒಂದೆರಡು ಕೋಟಿಯಲ್ಲ, 25 ಕೋಟಿ ರೂಪಾಯಿ!. ಕೇರಳ ಸರ್ಕಾರದ ಓಣಂ ಲಾಟರಿ ಇವರ ಬದುಕು ಬದಲಿಸಿತು. ಆದರೆ ವಿಪರ್ಯಾಸವೇನು ಗೊತ್ತೇ?
ಅನೂಪ್ ಗೆದ್ದಿರುವುದು 25 ಕೋಟಿ ರೂ ಬಂಪರ್ ಲಾಟರಿ ನಿಜ. ಆದ್ರೆ ಇವರ ಕೈಗೆ ಸಿಗುವುದು ಮಾತ್ರ 15 ಕೋಟಿ ರೂಪಾಯಿ. ಹೌದು. ಇದಕ್ಕೆ ಕಾರಣ ತೆರಿಗೆ. ಅನೂಪ್ ಗೆದ್ದಿರುವ ಅಷ್ಟೂ ಹಣಕ್ಕೆ ಶೇ 30 ಕ್ಕಿಂತಲೂ ಹೆಚ್ಚು ತೆರಿಗೆ ಕಟ್ಟಬೇಕು. ಹಾಗಾಗಿ, ಗೆದ್ದ 25 ಕೋಟಿ ರೂಪಾಯಿಗಳಲ್ಲಿ ಜೇಬು ಸೇರುವುದು 10 ಕೋಟಿ ರೂಪಾಯಿ ಮಾತ್ರ. ಹಾಗಂತ ಇದನ್ನು ಕೇವಲ ಹತ್ತು ಕೋಟಿ ರೂಪಾಯಿ ಎನ್ನಲು ಸಾಧ್ಯವೇ?.
ಬಾಣಸಿಗನ ಕೆಲಸಕ್ಕೆ ಮಲೇಷಿಯಾಗೆ ಹೋಗುವ ಸಿದ್ಧತೆಯಲ್ಲಿದ್ದರು: ಅನೂಪ್ ಕೇರಳದ ರಾಜಧಾನಿ ತಿರುವನಂತಪುರಂನ ಶ್ರೀವರಹಂನಲ್ಲಿ ಆಟೋ ಚಾಲಕರು. ಇದಕ್ಕೂ ಮುನ್ನ ಹೊಟೇಲೊಂದರದಲ್ಲಿ ಅಡುಗೆ ಕೆಲಸ ಮಾಡುತ್ತಿದ್ದರು. ಇದೀಗ ಇದೇ ಅಡುಗೆ ಕೆಲಸಕ್ಕೆಂದು ಮಲೇಷಿಯಾ ದೇಶಕ್ಕೆ ಹೊರಡುವ ಸಿದ್ಧತೆಯಲ್ಲಿದ್ದರು. ಆದ್ರೆ ಇನ್ನು ಮುಂದೆ ಇವರು ಬದುಕು ಅರಸಿ ಹೊರ ದೇಶಕ್ಕೆ ಹೋಗುವ ಅವಶ್ಯಕತೆ ಇಲ್ಲ. ಗೆದ್ದ ಹಣದಲ್ಲಿ ತೆರಿಗೆ ಕಳೆದು ಒಟ್ಟು 15 ಕೋಟಿ 75 ಲಕ್ಷ ರೂಪಾಯಿ ಹಣ ಇವರ ಖಾತೆ ಸೇರಿದೆ!. ಅಂದ ಹಾಗೆ, ಇವರಿಗೆ ಇಷ್ಟು ಹಣ ತಂದು ಕೊಟ್ಟ ಲಾಟರಿ ನಂಬರ್ ಹೀಗಿದೆ ನೋಡಿ.. TJ 750605! ಈ ಬಾರಿಯ ಓಣಂ ಇಷ್ಟೊಂದು ಸ್ಪೆಷಲ್ ಆಗಿರುತ್ತೆ ಅಂತ ಅನೂಪ್ ಕನಸಿನಲ್ಲೂ ಊಹಿಸಿರಲಿಲ್ಲ ಅನ್ಸುತ್ತೆ!.
ಇದನ್ನೂ ಓದಿ: ಖುಲಾಯಿಸಿದ ಅದೃಷ್ಟ: 25 ಕೋಟಿ ರೂಪಾಯಿಗಳ ಬಂಪರ್ ಲಾಟರಿ ಗೆದ್ದ ಆಟೋ ಡ್ರೈವರ್
ಮಗನ ಪಿಗ್ಗಿ ಬ್ಯಾಂಕ್‌ನಿಂದ ಹಣ ತೆಗೆದು ಲಾಟರಿ ಟಿಕೆಟ್ ಖರೀದಿ: ಕುತೂಹಲದ ಸಂಗತಿ ಎಂದರೆ, ಟಿಕೆಟ್ ಖರೀದಿಸಲು 500 ರೂಪಾಯಿ ಹಣ ಹೊಂದಿಸಲು ಅನೂಪ್ ಸಾಕಷ್ಟು ಪರದಾಡಿದ್ದಾರೆ. ಕೊನೆಗೆ 450 ರೂಪಾಯಿ ಹೇಗೋ ಹೊಂದಿಸಿದ್ದಾರೆ. ಇನ್ನೂ 50 ರೂಪಾಯಿ ಕಡಿಮೆಯಾಗಿತ್ತು. ವಿಧಿ ಇಲ್ಲದೆ ಮಗನ ಪಿಗ್ಗಿ ಬ್ಯಾಂಕ್‌ನಲ್ಲಿದ್ದ ಹಣವನ್ನೂ ಸೇರಿಸಿ ತೆಗೆದು ಟಿಕೆಟ್ ಖರೀದಿದ್ದಾಗಿ ಎಂದು ಅನೂಪ್ ಹೇಳುತ್ತಾರೆ. ಒಂದು ವೇಳೆ ನಾನು ಲಾಟರಿ ಗೆಲ್ಲದೇ ಇರ್ತಿದ್ರೆ ನನ್ನ ಪತ್ನಿ ನನಗೆ ಬೈತಿದ್ಲು. ಲಾಟರಿಗೆ ಹೆಚ್ಚು ಹಣ ಹಾಕದಂತೆ ಆಕೆ ನನಗೆ ಯಾವಾಗಲೂ ಬುದ್ದಿವಾದ ಹೇಳುತ್ತಾಳೆ ಎಂದು ಅನೂಪ್ ನಕ್ಕು ಮಾತು ಮುಗಿಸಿದರು. ಅನೂಪ್ ಅವರ ಪುಟ್ಟ ಕುಟುಂಬದಲ್ಲಿ ಪತ್ನಿ, ಮಗ ಹಾಗು ಅವರ ತಾಯಿ ಇದ್ದಾರೆ.