ನವದೆಹಲಿ: ಗಾಲ್ವಾನ್ ಸಂಘರ್ಷಕ್ಕೆ ನಿನ್ನೆಗೆ ಒಂದು ವರ್ಷ ತುಂಬಿದೆ. ಇದೇ ವೇಳೆ ಚೀನಾದ ವಿರುದ್ಧ ಮಿಲಿಟರಿಯ ಮೂಲಕವಾಗಲಿ ಅಥವಾ ಆರ್ಥಿಕತೆಯ ಮೂಲಕವಾಗಲಿ ಹೊಡೆತ ನೀಡಬೇಕೆಂದು ಕಾಂಗ್ರೆಸ್ ಪಕ್ಷ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಈ ಕುರಿತು ಪ್ರಧಾನಿ ನರೇಂದ್ರ ವಿರುದ್ಧ ಹರಿಹಾಯ್ದಿರುವ ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರೀನೇತ್, 'ಪ್ರಧಾನಿ ಮೋದಿ ನಮ್ಮ ದೇಶದ ಗಡಿಯೊಳಗೆ ಯಾರೂ ನುಸುಳಿಲ್ಲ ಎಂದೇ ಹೇಳಿದ್ದರು. ಈ ವಿಚಾರವಾಗಿ ಈಗಲೂ ಹುತಾತ್ಮ ಯೋಧರ ಕುಟುಂಬದವರ ಬಳಿ ಕ್ಷಮೆ ಕೇಳಿಲ್ಲ' ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯೊಂದರಲ್ಲಿ ಗಾಲ್ವಾನ್ ಕಣಿವೆ ಸಂಘರ್ಷದ ವಿಚಾರವಾಗಿ ಮಾತನಾಡಿದ ಅವರು, 'ಚೀನಾ ಆಕ್ರಮಣಾಕಾರಿ ನೀತಿಯನ್ನು ಉಲ್ಲಂಘಿಸಿದ್ದಕ್ಕೆ ಪ್ರಧಾನಿ ಎಂದಾದರೂ ಪ್ರಶ್ನಿಸಿದ್ದಾರೆಯೇ? ಎಂದು ಗೊತ್ತಾಗಬೇಕಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ರಾಜಕೀಯ ಕುಟುಂಬದ ಯುವಕನಿಗೆ ISI ಹನಿಟ್ರ್ಯಾಪ್: ಓರ್ವನ ಬಂಧನ
ಗಾಲ್ವಾನ್ ಕಣಿವೆ ಸಂಘರ್ಷದ ವೇಳೆ ಚೀನಾ ಶಾಂತಿ ಒಪ್ಪಂದವನ್ನು ಮುರಿದಿದೆ. ಈ ವಿಚಾರದ ಬಗ್ಗೆ ಕಾಂಗ್ರೆಸ್ ಪಕ್ಷ ಮತ್ತು ಭಾರತದ ಪ್ರಜೆಗಳು ತಿಳಿದುಕೊಳ್ಳಬೇಕಿದೆ. ಈ ಸಂಘರ್ಷದ ಬಗ್ಗೆ ಇನ್ನೂ ಸ್ಪಷ್ಟ ನಿಲುವಿಗೆ ಕೇಂದ್ರ ಸರ್ಕಾರ ಬಂದಿಲ್ಲ ಎಂಬುದು ಗೊತ್ತಾಗುತ್ತಿದೆ ಎಂದು ಬಿಜೆಪಿ ವಿರುದ್ಧ ಸುಪ್ರಿಯಾ ಶ್ರೀನೇತ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದರ ಜೊತೆಗೆ ಚೀನಾದ ವಿರುದ್ಧ ಮಿಲಿಟರಿ ಅಥವಾ ಆರ್ಥಿಕ ಕ್ರಮಗಳ ಮೂಲಕ ಕಠಿಣವಾಗಿ ಮಾತನಾಡಬೇಕೆಂದು ನಾವು ಪ್ರಧಾನಮಂತ್ರಿಯನ್ನು ಒತ್ತಾಯಿಸುತ್ತೇವೆ. ಮೊಬೈಲ್ ಅಪ್ಲಿಕೇಶನ್‌ಗಳನ್ನು ನಿಷೇಧಿಸುವುದರಿಂದ ಇದು ಸಾಕಾಗುವುದಿಲ್ಲ ಎಂದು ಅವರು ಟೀಕಿಸಿದರು.