ಶ್ರೀನಗರ (ಜಮ್ಮು ಕಾಶ್ಮೀರ): ಬುಧವಾರ ರಾತ್ರಿ ಶ್ರೀನಗರದಲ್ಲಿ ಮೈನಸ್ 8.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದ್ದು, 30 ವರ್ಷಗಳ ಬಳಿಕ ಅತಿಶೀತ ರಾತ್ರಿಗೆ ಶ್ರೀನಗರ ಸಾಕ್ಷಿಯಾಗಿದೆ.
1991ರಲ್ಲಿ -11.3 ಡಿಗ್ರಿ ಸೆಲ್ಸಿಯಸ್ ಹಾಗೂ 1995ರಲ್ಲಿ 8.3 ಡಿಗ್ರಿ ಸೆಲ್ಸಿಯಸ್ ತಾಪಮಾನ ಶ್ರೀನಗರದಲ್ಲಿ ದಾಖಲಾಗಿತ್ತು. ಈಗ ದಾಖಲಾಗಿರುವ ತಾಪಮಾನದಿಂದಾಗಿ ದಾಲ್ ಸರೋವರ ಸೇರಿದಂತೆ ನೀರಿನ ಮೂಲಗಳು ಭಾಗಶಃ ಮಂಜುಗಡ್ಡೆಯಂತಾಗುತ್ತದೆ. ರಸ್ತೆಗಳು ಸಹ ಹಿಮಾವೃತವಾಗಿದ್ದು, ವಾಹನ ಚಾಲನೆಗೆ ಅಪಾಯಕಾರಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ: ಸ್ಪಲ್ಪದರಲ್ಲೇ ತಪ್ಪಿದ ಭಾರೀ ಅನಾಹುತ.. ಹಿಮದ ರಾಶಿಗೆ ಇಂಡಿಗೋ ವಿಮಾನ ಡಿಕ್ಕಿ
ಡಿಸೆಂಬರ್ 21 ರಂದು ಪ್ರಾರಂಭವಾದ 'ಚಿಲ್ಲೈ-ಕಲಾನ್' ಜನವರಿ 31 ರಂದು ಕೊನೆಗೊಳ್ಳಲಿದೆ. (ಚಿಲ್ಲೈ-ಕಲಾನ್, ಇದು ಕಾಶ್ಮೀರ ಹಾಗೂ ಲಡಾಖ್ ಪ್ರದೇಶದಲ್ಲಿನ ಶೀತ ವಾತಾವರಣಕ್ಕೆ ನೀಡಿದ ಹೆಸರಾಗಿದೆ)
ಕಣಿವೆ ರಾಜ್ಯದಲ್ಲಿ ಕಳೆದ ಕೆಲ ದಿನಗಳಿಂದ ಹಿಮಪಾತ ಹಾಗೂ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದ್ದು, ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿ ಕೂಡ ಒಂದು ವಾರದಿಂದ ಮುಚ್ಚಲ್ಪಟ್ಟಿದೆ.