ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಇಂದು ಪುನರ್ ರಚನೆ ಆಗುತ್ತಿದೆ. ಅನೇಕ ಹೊಸ ಮುಖಗಳಿಗೆ ಅವಕಾಶ ಸಿಗುವುದು ಬಹುತೇಕ ಖಚಿತವಾಗುತ್ತಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಕರ್ನಾಟಕದ ನಾಲ್ವರಿಗೆ ನಮೋ ಕ್ಯಾಬಿನೆಟ್ನಲ್ಲಿ ಸ್ಥಾನ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
'ಈಟಿವಿ ಭಾರತ'ಗೆ ಲಭ್ಯವಾಗಿರುವ ಉನ್ನತ ಮೂಲಗಳ ಮಾಹಿತಿ ಪ್ರಕಾರ, ಬೀದರ್ ಬಿಜೆಪಿ ಸಂಸದ ಭಗವಂತ್ ಖೂಬಾ, ಚಿತ್ರದುರ್ಗದ ಸಂಸದ ಆನೇಕಲ್ ನಾರಾಯಣಸ್ವಾಮಿ ಹಾಗೂ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹಾಗೂ ರಾಜ್ಯಸಭೆ ಸದಸ್ಯರಾಗಿರುವ ರಾಜೀವ್ ಚಂದ್ರಶೇಖರ್ ಅವರಿಗೆ ಮಂತ್ರಿಗಿರಿ ನೀಡಲಾಗುತ್ತಿದ್ದು, ಮೋದಿ ಸಂಪುಟದಲ್ಲಿ ಇವರಿಗೆ ರಾಜ್ಯ ಖಾತೆ ನೀಡಲು ನಿರ್ಧರಿಸಲಾಗಿದೆ.
ಇದನ್ನೂ ಓದಿರಿ: ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ರಾಜೀನಾಮೆ
ಈಗಾಗಲೇ ಮೋದಿ ಕ್ಯಾಬಿನೆಟ್ನಲ್ಲಿ ಸಚಿವರಾಗಿದ್ದ ರಮೇಶ್ ಪೋಖ್ರಿಯಾಲ್ ನಿಶಾಂಕ್, ಹರ್ಷವರ್ಧನ್, ಡಿ.ವಿ ಸದಾನಂದ ಗೌಡ ಸೇರಿದಂತೆ 10ಕ್ಕೂ ಹೆಚ್ಚು ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಹೊಸ ಮುಖಗಳಿಗೆ ಅವಕಾಶ ಮಾಡಿಕೊಟ್ಟಿದ್ದಾರೆ.
ಕರ್ನಾಟಕದ ನಾಲ್ವರ ಜೊತೆಗೆ ಮಧ್ಯಪ್ರದೇಶದ ಜ್ಯೋತಿರಾದಿತ್ಯ ಸಿಂಧಿಯಾ, ಸರ್ಬಾನಂದ ಸೋನೋವಾಲ್, ಪಶುಪತಿನಾಥ್ ಪಾರಸ್, ನಾರಾಯಣ ರಾಣೆ ಹೆಸರೂ ಸಹ ಕೇಳಿ ಬರುತ್ತಿವೆ.
ಇಂದು ಸಂಜೆ 6 ಗಂಟೆಗೆ ಸಚಿವ ಸಂಪುಟ ಪುನರ್ ರಚನೆಯಾಗುತ್ತಿದೆ. ಪ್ರಮುಖವಾಗಿ ಯುವಕರಿಗೆ ಮಣೆ ಹಾಕಲು ಮೋದಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.