ಬೆಂಗಳೂರು: 2022 ರ ಸಾಲಿನ ಎಂಜಿನಿಯರಿಂಗ್ ಸೇರಿ ವೃತ್ತಿಪರ ಕೋರ್ಸ್ಗಳ ಸಾಮಾನ್ಯ ಪ್ರವೇಶ ಪರೀಕ್ಷೆಯು ಇಂದಿನಿಂದ (ಜೂನ್ 16 ರಿಂದ) ಆರಂಭವಾಗಲಿದೆ. ಜೂನ್ 16 ಹಾಗೂ 17 ರಂದು ರಾಜ್ಯಾದ್ಯಂತ ಒಟ್ಟು 486 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆಯಲಿದ್ದಾರೆ. ಒಟ್ಟಾರೆ 2,16,525 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದು, ಇದರಲ್ಲಿ 1,04,550 ಪುರುಷ ಹಾಗೂ 1,11,975 ಮಹಿಳಾ ಅಭ್ಯರ್ಥಿಗಳಿದ್ದಾರೆ.
ಪರೀಕ್ಷೆಗೆ ಎಲೆಕ್ಟ್ರಾನಿಕ್ ಗ್ಯಾಜೆಟ್ಸ್ ತರುವಂತಿಲ್ಲ: ಸಿಇಟಿ ಪರೀಕ್ಷೆಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಜಾರಿ ಮಾಡಿದೆ. ಅಭ್ಯರ್ಥಿಗಳು ಯಾವುದೇ ಎಲೆಕ್ಟ್ರಾನಿಕ್ ಗ್ಯಾಜೆಟ್, ಕೈಗಡಿಯಾರ, ಬ್ಲೂಟೂತ್ ಮತ್ತು ಮೊಬೈಲ್ ಫೋನುಗಳನ್ನು ಪರೀಕ್ಷಾ ಕೇಂದ್ರದೊಳಗೆ ತರುವಂತಿಲ್ಲ.
ಸರ್ಜಿಕಲ್ ಮಾಸ್ಕ್ ಮಾತ್ರ ಧರಿಸಬಹುದು: ಪರೀಕ್ಷಾರ್ಥಿಗಳು ತಮ್ಮ ತಲೆ ಹಾಗೂ ಕಿವಿಯನ್ನು ಮುಚ್ಚುವಂಥ ಯಾವುದೇ ಬಟ್ಟೆ ಧರಿಸುವಂತಿಲ್ಲ. ಇನ್ನು ಮಾಸ್ಕ್ ಮಾತ್ರ ಧರಿಸಬಹುದಾಗಿದ್ದು, ಅದೂ ಸರ್ಜಿಕಲ್ ಮಾಸ್ಕ್ ಆಗಿರಬೇಕು.
ಬೆಂಗಳೂರಿನಲ್ಲಿ 87 ಕೇಂದ್ರಗಳು: ಬೆಂಗಳೂರಿನಲ್ಲಿ 87 ಪರೀಕ್ಷಾ ಕೇಂದ್ರಗಳು ಸೇರಿದಂತೆ ರಾಜ್ಯಾದ್ಯಂತ ಒಟ್ಟು 486 ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ ನಡೆಯಲಿವೆ.
ವೇಳಾಪಟ್ಟಿ: ಜೂನ್ 16 ರಂದು ಬೆಳಗ್ಗೆ ಜೀವಶಾಸ್ತ್ರ - ಮಧ್ಯಾಹ್ನ ಗಣಿತ ಹಾಗೂ 17 ರಂದು ಬೆಳಗ್ಗೆ ಭೌತಶಾಸ್ತ್ರ - ಮಧ್ಯಾಹ್ನ ರಸಾಯನಶಾಸ್ತ್ರ ಪರೀಕ್ಷೆಗಳು ನಡೆಯಲಿವೆ.
ಕನ್ನಡ ಭಾಷಾ ಪರೀಕ್ಷೆ 18ರಂದು: ಹೊರನಾಡು ಹಾಗೂ ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಕನ್ನಡ ಭಾಷಾ ಪರೀಕ್ಷೆಯು ಜೂನ್ 18 ರಂದು ನಡೆಯಲಿದೆ. ಒಟ್ಟು 1708 ಅಭ್ಯರ್ಥಿಗಳು ಕನ್ನಡ ಭಾಷಾ ಪರೀಕ್ಷೆ ಬರೆಯಲಿದ್ದಾರೆ. ಬೀದರ್, ಬೆಳಗಾವಿ, ವಿಜಯಪುರ, ಬಳ್ಳಾರಿ, ಮಂಗಳೂರು ಹಾಗೂ ಬೆಂಗಳೂರಿನ ಕೇಂದ್ರಗಳಲ್ಲಿ ಕನ್ನಡ ಭಾಷೆ ಪರೀಕ್ಷೆ ನಡೆಯಲಿವೆ.
486 ವೀಕ್ಷಕರು: ಉಪವಿಭಾಗಾಧಿಕಾರಿಗಳ ಮಟ್ಟದ 486 ಅಧಿಕಾರಿಗಳು ವೀಕ್ಷಕರಾಗಿ ಕಾರ್ಯನಿರ್ವಹಿಸಲಿದ್ದು, 972 ಜನ ಅಧಿಕಾರಿಗಳು ವಿಶೇಷ ವಿಚಕ್ಷಣಾ ತಂಡದ ಸದಸ್ಯರಾಗಿ ಪರೀಕ್ಷೆಗಳ ಮೇಲೆ ಕಣ್ಣಿಡಲಿದ್ದಾರೆ. ಅಂದಾಜು 9600 ಪರೀಕ್ಷಾ ಕೋಣೆ ಅಧಿಕಾರಿಗಳು ಮತ್ತು ಒಟ್ಟು 20,483 ಸಿಬ್ಬಂದಿಯನ್ನು ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿಸಲಾಗುತ್ತಿದೆ.