ಬೆಂಗಳೂರು/ನವದೆಹಲಿ: ಹಿಜಾಬ್ ವಿವಾದ ರಾಜ್ಯದಲ್ಲಿ ತಾರಕಕ್ಕೆ ಏರಿದ್ದು, ಇಂದು ಹೈಕೋರ್ಟ್ ಮಹತ್ವದ ವಿಚಾರಣೆಯನ್ನು ನಡೆಸುತ್ತಿದೆ. ಅರ್ಜಿದಾರರು ಸಲ್ಲಿಕೆ ಮಾಡಿರುವ ನಾಲ್ಕೂ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ಕೈಗೆತ್ತಿಕೊಂಡಿದೆ.
ಸಂವಿಧಾನ ಹೇಳಿದಂತೆ ಮಾಡ್ತೇವಿ: ಈ ಅರ್ಜಿಗಳನ್ನು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸುತ್ತಿದ್ದು, ಎಲ್ಲ ಭಾವನೆಗಳನ್ನು ಪಕ್ಕಕ್ಕೆ ಇರಿಸಿ. ಸಂವಿಧಾನ ಏನು ಹೇಳುತ್ತದೋ ಅದರಂತೆ ನಡೆಯುತ್ತೇವೆ ಎಂದು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ವಿಚಾರಣೆ ವೇಳೆ ಹೇಳಿದ್ದಾರೆ.
ನಾವು ಮಧ್ಯಪ್ರವೇಶ ಮಾಡೋಲ್ಲ: ಅಡ್ವೊಕೇಟ್ ಜನರಲ್: ಈ ವಿಚಾರದಲ್ಲಿ ಮಧ್ಯಪ್ರವೇಶಿಸಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದ್ದು, ಸಮವಸ್ತ್ರವನ್ನು ನಿರ್ಧರಿಸಲು ನಾವು ಕಾಲೇಜು ಅಭಿವೃದ್ಧಿ ಸಮಿತಿಗಳಿಗೆ ಸ್ವಾತಂತ್ರ್ಯ ನೀಡಿದ್ದೇವೆ. ವಿದ್ಯಾರ್ಥಿಗಳು ಅದನ್ನು ಪಾಲಿಸುತ್ತಾರೆ ಎಂದು ಅಡ್ವೊಕೇಟ್ ಜನರಲ್ ಹೇಳಿದ್ದು, ವಿಚಾರಣೆ ಮುಂದುವರೆಯುತ್ತಿದೆ.
ಸ್ಕಾರ್ಫ್ ಧರಿಸುವುದು ಇಸ್ಲಾಮಿಕ್ ಧರ್ಮದ ಭಾಗ - ಕಾಮತ್: ವಿಚಾರಣೆ ವೇಳೆ ಹಿಜಾಬ್ ಪರ ವಾದ ಮಂಡನೆ ಮಾಡಿದ ಹಿರಿಯ ದೇವದತ್ತ ಕಾಮತ್ ತಲೆಗೆ ಸ್ಕಾರ್ಫ್ ಧರಿಸುವುದು ಇಸ್ಲಾಮಿಕ್ ಧರ್ಮದ ಭಾಗವಾಗಿದೆ. ಪವಿತ್ರ ಕುರಾನ್ ಸೂಚಿಸಿದಂತೆ ಇದು ಅತ್ಯಗತ್ಯ ಧಾರ್ಮಿಕ ಆಚರಣೆಯಾಗಿದೆ. ಮದ್ರಾಸ್, ಬಾಂಬೆ ಮತ್ತು ಕೇರಳ ಕೋರ್ಟ್ಗಳು ಇಂಥಹ ಸಮಸ್ಯೆಯನ್ನು ನಿಭಾಯಿಸುವುದಿಲ್ಲ ಎಂದಿದ್ದಾರೆ.
ಹಿಜಾಬ್ ಧರಿಸುವುದು ಸಂವಿಧಾನ ಆರ್ಟಿಕಲ್ 19(1)(ಎ) ಮತ್ತು ಆರ್ಟಿಕಲ್ 19(6) ಅಡಿಯಲ್ಲಿ ಬರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿನಿಂದ ರಕ್ಷಿಸಲ್ಪಟ್ಟಿದೆ ಎಂದು ದೇವದತ್ತ ಕಾಮತ್ ಹೇಳಿದ್ದು, ಹಿಜಾಬ್ ಧರಿಸುವುದು ಖಾಸಗಿತನದ ಹಕ್ಕಿಗೆ ಸಂಬಂಧಿಸಿದ ಅಂಶವಾಗಿದೆ. ಇದನ್ನು ಸಂವಿಧಾನ 21ನೇ ವಿಧಿಯಲ್ಲಿ ಈ ಮೂಲಕ ಖಾಸಗಿತನವನ್ನು ಉಲ್ಲೇಖಿಸಲಾಗಿದೆ ಎಂದು ದೇವದತ್ತ ಕಾಮತ್ ಹೇಳಿದ್ದಾರೆ. ಇದಕ್ಕೆ ಸುಪ್ರೀಂಕೋರ್ಟ್ನ ಪುಟ್ಟಸ್ವಾಮಿ ತೀರ್ಪನ್ನು ಉಲ್ಲೇಖಿಸಿದ್ದಾರೆ.
ಸರ್ಕಾರಿ ಆದೇಶವು ಕರ್ನಾಟಕ ಶಿಕ್ಷಣ ನಿಯಮಗಳ ವ್ಯಾಪ್ತಿಯಿಂದ ಹೊರಗಿದೆ ಮತ್ತು ಈ ವಿಚಾರಕ್ಕೆ ಸಂಬಂಧಿಸಿದಂತೆ ಆದೇಶ ಹೊರಡಿಸಲು ರಾಜ್ಯಕ್ಕೆ ಯಾವುದೇ ಅಧಿಕಾರವಿಲ್ಲ ಎಂದು ದೇವದತ್ತ ಕಾಮತ್ ಅಭಿಪ್ರಾಯಪಟ್ಟಿದ್ದಾರೆ.
ಶಾಂತಿ ಕಾಪಾಡಲು ಸಿಎಂ ಮನವಿ: ಈ ಹಿನ್ನೆಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಸಿಎಂ ಬಸವರಾಜ ಬೊಮ್ಮಾಯಿ ಎಲ್ಲ ಸಾರ್ವಜನಿಕರಿಗೂ ಶಾಂತಿಯನ್ನು ಕಾಪಾಡಲು ಮನವಿ ಮಾಡಿದ್ದಾರೆ. ದೆಹಲಿಗೆ ಭೇಟಿ ನೀಡಿದ್ದ ಸಿಎಂ ಬೊಮ್ಮಾಯಿ, ಅಲ್ಲಿನ ಅಂತಾರಾಜ್ಯ ಜಲ ವಿವಾದದ ಕುರಿತು ಅಧಿಕಾರಿಗಳೊಂದಿಗೆ ಸಭೆ ನಡೆಸಿದ ನಂತರ ಮಾತನಾಡಿ ಸಂಬಂಧಪಟ್ಟವರೆಲ್ಲಾ ಶಾಂತಿಯನ್ನು ಕಾಪಾಡಿಕೊಳ್ಳಬೇಕು ಮತ್ತು ಮಕ್ಕಳನ್ನು ಓದಲು ಬಿಡಬೇಕು. ಇಂದು ಹೈಕೋರ್ಟ್‌ನಲ್ಲಿ ವಿಚಾರಣೆಯಾಗಲಿದೆ. ತೀರ್ಪು ಬರುವವರೆಗೆ ಕಾಯೋಣ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: ಅಂತಾರಾಜ್ಯ ಜಲ ವ್ಯಾಜ್ಯಗಳ ಕುರಿತು ಕಾನೂನು ತಜ್ಞರೊಂದಿಗೆ ಸಿಎಂ ಸಭೆ..!