ಕಾನ್ಪುರ(ಉತ್ತರ ಪ್ರದೇಶ): ದೇವಸ್ಥಾನ, ಮಸೀದಿ, ಗುರುದ್ವಾರ ಹೀಗೆ ಎಲ್ಲೆಂದರಲ್ಲಿ ಶೂ, ಚಪ್ಪಲಿ ಕಳ್ಳತನವಾಗುವುದು ಸಾಮಾನ್ಯ ಎಂಬುದನ್ನು ನೀವು ಕೇಳಿರಬಹುದು ಮತ್ತು ನೋಡಿರಬಹುದು. ಇದನ್ನು ಸಾಮಾನ್ಯ ವಿದ್ಯಮಾನವೆಂದು ಪರಿಗಣಿಸಿ ಜನರು ಸದ್ದಿಲ್ಲದೆ ತಮ್ಮ ಮನೆಗೆ ಬರಿಗಾಲಿನಲ್ಲಿ ಹೋಗಿ ಬಳಿಕ ಹೊಸ ಚಪ್ಪಲಿಗಳನ್ನು ತೆಗೆದುಕೊಳ್ಳುತ್ತಾರೆ. ಆದರೆ ಉತ್ತರ ಪ್ರದೇಶದ ಕಾನ್ಪುರದ ವ್ಯಕ್ತಿಯೊಬ್ಬರು ತಮ್ಮ ಚಪ್ಪಲಿ ಕಳ್ಳತನಕ್ಕೆ ಸಂಬಂಧಿಸಿದಂತೆ ಆನ್‌ಲೈನ್‌ನಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಸದ್ಯ ಈ ವಿಶಿಷ್ಟ ಪ್ರಕರಣದಲ್ಲಿ ದಾಖಲಾಗಿರುವ ಎಫ್‌ಐಆರ್ ವಿಷಯ ಎಲ್ಲೆಡೆ ಚರ್ಚೆಯಾಗುತ್ತಿದೆ.
ದೇವಸ್ಥಾನ-ಮಸೀದಿಯನ್ನು ಪ್ರವೇಶಿಸುವ ಮೊದಲು ನಾವು ನಮ್ಮ ಶೂ ಹಾಗೂ ಚಪ್ಪಲಿಗಳನ್ನು ಹೊರಗೆ ಬಿಡುತ್ತೇವೆ. ಆ ಸಂದರ್ಭದಲ್ಲಿ ಅನೇಕ ಬಾರಿ ನಮ್ಮ ಶೂಗಳು ಮತ್ತು ಚಪ್ಪಲಿಗಳು ಕಳ್ಳತನವಾಗುತ್ತವೆ. ಇದು ಸಾಮಾನ್ಯವಾದ ವಿಷಯ. ಆದರೆ ವಸ್ತು ಚಿಕ್ಕದಾಗಿರಲಿ ಅಥವಾ ದೊಡ್ಡದಿರಲಿ ಅದು ಕಳ್ಳತನವೇ. ಈ ಆಲೋಚನೆಯೊಂದಿಗೆ ಉತ್ತರ ಪ್ರದೇಶದ ಕಾನ್ಪುರ ಜಿಲ್ಲೆಯ ನಿವಾಸಿ ಕಾಂತಿ ಶರಣ್ ನಿಗಮ್ ಎಂಬುವವರು ದೇವಸ್ಥಾನದಲ್ಲಿ ತನ್ನ ಚಪ್ಪಲಿಗಳನ್ನು ಕಳವು ಮಾಡಿದ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ.
ಆನ್‌ಲೈನ್ ಎಫ್‌ಐಆರ್: ಕಾನ್ಪುರ ಮಹಾನಗರದ ದಕ್ಷಿಣದಲ್ಲಿರುವ ದಬೌಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಕಾಂತಿ ಶರಣ್ ನಿಗಮ್ ಎಲೆಕ್ಟ್ರಾನಿಕ್ ಕಂಪನಿಯಲ್ಲಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಜಿಲ್ಲೆಯ ಪ್ರಸಿದ್ಧ ಭೈರವ ಬಾಬಾ ದೇವಸ್ಥಾನಕ್ಕೆ ಭಾನುವಾರ ಕಾಂತಿ ಶರಣ್ ತೆರಳಿದ್ದರು. ದರ್ಶನಕ್ಕೂ ಮುನ್ನ ಪೂಜಾ ಸಾಮಗ್ರಿ ಮಾರುವ ಅಂಗಡಿಯ ಬಳಿ ಚಪ್ಪಲಿ ಬಿಟ್ಟಿದ್ದರು. ದರ್ಶನ ಮುಗಿಸಿ ಬಂದು ನೋಡಿದಾಗ ಅಂಗಡಿಯ ಸಮೀಪ ಬಿಟ್ಟಿದ್ದ ಚಪ್ಪಲಿಗಳು ಮಾಯವಾಗಿದ್ದವು.
ಇದಾದ ಬಳಿಕ ಕಾಂತಿ ಶರಣ್ ಸುತ್ತಮುತ್ತ ಹುಡುಕಿದರು. ಎಷ್ಟೇ ಹುಡುಕಿದರೂ ಚಪ್ಪಲಿ ಎಲ್ಲೂ ಸಿಗದ ಕಾರಣ ಅಂಗಡಿಯವನನ್ನು ಕೇಳಿದಾಗ ಇಲ್ಲಿ ಆಗಾಗ ಚಪ್ಪಲಿ ಕಳ್ಳತನವಾಗುತ್ತವೆ ಎಂದು ಅಂಗಡಿಯವರು ಉತ್ತರಿಸಿದರು. ಇದಾದ ನಂತರ ಅವರು ತಮ್ಮ ಹೊಸ ಚಪ್ಪಲಿಗಳನ್ನು ದೇವಾಲಯದ ಆವರಣದ ಹೊರಗಿನಿಂದ ಕಳವು ಮಾಡಲಾಗಿದೆ ಎಂದು ಆನ್‌ಲೈನ್ ಮೂಲಕ ಎಫ್‌ಐಆರ್ ದಾಖಲಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಕಾಂತಿ ಶರಣ್ "ಎರಡು ದಿನಗಳ ಹಿಂದೆ ಹೊಸ ಚಪ್ಪಲಿ ಖರೀದಿಸಿದ್ದೆ. ನೀಲಿ ಬಣ್ಣದ ಚಪ್ಪಲಿ. ನಾನು ಪ್ರತಿ ಭಾನುವಾರ ಭೈರವ ಬಾಬಾನ ದರ್ಶನಕ್ಕೆ ಬರುತ್ತೇನೆ. ಏಕೆಂದರೆ ಭಾನುವಾರವನ್ನು ಭೈರವ ಬಾಬಾನ ದರ್ಶನಕ್ಕೆ ಸೂಕ್ತ ದಿನವೆಂದು ಪರಿಗಣಿಸಲಾಗುತ್ತದೆ. ಈ ಮೊದಲು ನನ್ನ ಚಪ್ಪಲಿ ಕಳ್ಳತನವಾಗಿರಲಿಲ್ಲ. ಆದರೆ ಇಂದು ಅಂಗಡಿಯ ಸುತ್ತಲೂ ಅನೇಕ ಹಳೆಯ ಚಪ್ಪಲಿಗಳು ಬಿದ್ದಿದ್ದವು. ಆದರೆ ನನ್ನ ಹೊಸ ಚಪ್ಪಲಿಗಳು ಮಾಯವಾಗಿವೆ" ಎಂದು ಬೇಸರ ತೋಡಿಕೊಂಡಿದ್ದಾರೆ.
"ಎಮ್ಮೆ, ಮೇಕೆ ಹಾಗೂ ಯಾವುದೇ ರಾಜಕಾರಣಿಯ ವಸ್ತು ಕಳ್ಳತನವಾಗುವುದನ್ನು ನಾನು ಆಗಾಗ ನೋಡಿದ್ದೇನೆ. ಆಡಳಿತ ಅದನ್ನು ಹುಡುಕಲು ಪ್ರಯತ್ನಿಸುತ್ತದೆ. ಆದರೆ ಸಾಮಾನ್ಯ ಜನರ ಚಪ್ಪಲಿ ಏಕೆ ಸಿಗುವುದಿಲ್ಲ?. ಹಾಗಾಗಿ ನಾನು ಆನ್‌ಲೈನ್‌ನಲ್ಲಿ ಎಫ್‌ಐಆರ್ ದಾಖಲಿಸಿದ್ದೇನೆ- ಕಾಂತಿ ಶರಣ್ ನಿಗಮ್.
ಈ ವಿಶಿಷ್ಟ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು 'ಕಳ್ಳತನ ಸಣ್ಣದಾಗಿರಲಿ ಅಥವಾ ದೊಡ್ಡದಾಗಿರಲಿ ಪ್ರಕರಣ ದಾಖಲಿಸುವುದು ಎಲ್ಲರ ಹಕ್ಕು. ಸದ್ಯ ಕಳ್ಳರ ಪತ್ತೆಗೆ ಯತ್ನಿಸುತ್ತಿದ್ದೇವೆ' ಎಂದಿದ್ದಾರೆ.
ಇದನ್ನೂ ಓದಿ: ಆನ್‌ಲೈನ್ ಬೆಟ್ಟಿಂಗ್ ಗೀಳು: ಅಣ್ಣನ ಮನೆಗೆ ಕನ್ನ ಹಾಕಿದ ತಮ್ಮನ ಬಂಧನ