ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ನಟಿ ಕಂಗನಾ ರಣಾವತ್ ಸಶಸ್ತ್ರ ಪಡೆಗಳಿಗೆ ನೇಮಕಾತಿಗಾಗಿ ಘೋಷಿಸಲಾಗಿರುವ 'ಅಗ್ನಿಪಥ್' ಯೋಜನೆಗೆ ಬೆಂಬಲ ಸೂಚಿಸಿದ್ದಾರೆ. ಅಲ್ಲದೇ, ಈ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿ ಮಾಡಿದ್ದಕ್ಕೆ ಕೇಂದ್ರ ಸರ್ಕಾರವನ್ನು ಶ್ಲಾಘಿಸಿದ್ದಾರೆ.
ಇನ್ಸ್ಟಾಗ್ರಾಮ್ನಲ್ಲಿ ಈ ಬಗ್ಗೆ ವಿವರವಾಗಿ ಬರೆದುಕೊಂಡಿರುವ ನಟಿ, ಇಸ್ರೇಲ್, ಇರಾಕ್, ಸ್ಪೇನ್ ಸೇರಿದಂತೆ ಅನೇಕ ರಾಷ್ಟ್ರಗಳು ಯುವಕರಿಗೆ ಸೈನ್ಯದಲ್ಲಿ ಸೇರಿ ಸೇವೆ ಸಲ್ಲಿಸುವುದನ್ನು ಕಡ್ಡಾಯ ಮಾಡಿವೆ. ಇದರಿಂದ ಶಿಸ್ತು, ರಾಷ್ಟ್ರೀಯತೆ ಮತ್ತು ಜೀವನ ಮೌಲ್ಯಗಳನ್ನು ಕಲಿಯಲು ಸೈನ್ಯದಲ್ಲಿ ಅವಕಾಶ ನೀಡಲಾಗುತ್ತಿದೆ. ಕೇಂದ್ರ ಸರ್ಕಾರ ಘೋಷಿಸಿರುವ ಅಗ್ನಿಪಥ್ ಯೋಜನೆಯು ಕೇವಲ ಉದ್ಯೋಗ ಸೃಷ್ಟಿ, ಹಣ ಸಂಪಾದನೆ ಮಾಡುವುದನ್ನು ಮಾತ್ರ ಒಳಗೊಂಡಿಲ್ಲ ಎಂದು ಬರೆದುಕೊಂಡಿದ್ದಾರೆ.
ಇದಲ್ಲದೇ, ಅಗ್ನಿಪಥ್ ಯೋಜನೆಯನ್ನು ಸಾಂಪ್ರದಾಯಿಕ ಗುರುಕುಲ ಪದ್ಧತಿಗೆ ಹೋಲಿಸಿರುವ ನಟಿ, ಹಿಂದಿನ ದಿನಗಳಲ್ಲಿ ಶಿಷ್ಯಂದಿರು ಹಣ ಕಟ್ಟಿ ಗುರುಕುಲ ಸೇರುತ್ತಿದ್ದರು. ಅಲ್ಲಿ ಸಂಸ್ಕೃತಿ, ಶಿಕ್ಷಣ, ಯುದ್ಧಾಭ್ಯಾಸ ಕಲಿಸಿಕೊಡುತ್ತಿದ್ದರು. ಅದರಂತೆ ಅಗ್ನಿಪಥದ ಮೂಲಕ ಬಿಸಿರಕ್ತದ ಯುವಕರು ಸೇನೆ ಸೇರಿ ಶಿಸ್ತು, ರಾಷ್ಟ್ರೀಯತೆಯನ್ನು ಕಲಿಯಲಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಡ್ರಗ್ಸ್, ಪಬ್ಜಿ ಗೇಮ್ ಚಟಕ್ಕೆ ಬಿದ್ದ ಚಿಕ್ಕವಯಸ್ಸಿನವರು ಈ ರೀತಿಯ ಸೇವೆಯಿಂದಾಗಿ ಪ್ರಬುದ್ಧತೆ ಪಡೆದುಕೊಳ್ಳಲಿದ್ದಾರೆ. ಹೀಗಾಗಿ ಸರ್ಕಾರದ ಈ ನಿರ್ಧಾರ ಅತ್ಯುತ್ತಮವಾಗಿದೆ ಎಂದು ಬೆಂಬಲ ವ್ಯಕ್ತಪಡಿಸಿದ್ದಾರೆ.
ಕೇಂದ್ರ ಸರ್ಕಾರ ಜೂನ್ 14 ರಂದು ಸಶಸ್ತ್ರ ಪಡೆಗಳಿಗೆ 4 ವರ್ಷಗಳ ಅವಧಿಗೆ ನೇಮಕಾತಿ ಮಾಡಿಕೊಳ್ಳಲು 'ಅಗ್ನಿಪಥ್ ಯೋಜನೆ'ಯನ್ನು ಪರಿಚಯಿಸಿತು. 17.5 ವರ್ಷದಿಂದ 23 ವರ್ಷದ ಯುವಕರು ಸೇನೆ ಸೇರಲು ಅವಕಾಶ ಗಿಟ್ಟಿಸಿಕೊಳ್ಳಲಿದ್ದಾರೆ. ಆದರೆ, ಸರ್ಕಾರದ ಈ ಯೋಜನೆಗೆ ಹಲವು ರಾಜ್ಯಗಳಲ್ಲಿ ಭಾರಿ ವಿರೋಧ ವ್ಯಕ್ತವಾಗಿ, ರೈಲು, ಬಸ್ಗಳಿಗೆ ಬೆಂಕಿ ಹಚ್ಚುವ ಮೂಲಕ ಹಿಂಸಾಚಾರ ನಡೆಸಲಾಗುತ್ತಿದೆ.
ಓದಿ: ಅಗ್ನಿಪಥ್ಗೆ ಆಕ್ರೋಶ: 60 ಕಿ.ಮೀ ಓಡಿ ಅಸಮಾಧಾನ ಹೊರಹಾಕಿದ ಸೇನಾ ಉದ್ಯೋಗದ ಆಕಾಂಕ್ಷಿ!