ನವದೆಹಲಿ: ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಕ್ಕೆ ತೆಗೆದುಕೊಂಡ ನಂತರ ಅಧಿಕಾರ ವಹಿಸಿಕೊಂಡ ಅನೇಕ ಅವಾಂತರಗಳಿಗೆ ಕಾಬೂಲ್ ಸಾಕ್ಷಿಯಾಯಿತು. ಭಾರತೀಯ ಉದ್ಯಮಿಯೊಬ್ಬರು ಅಲ್ಲಿಯೇ ಸಿಲುಕಿದ್ದು, ತಾಲಿಬಾನ್ ಸೇನೆ ಅವರನ್ನು ವಶಕ್ಕೆ ಪಡೆದಿತ್ತು. ಅವರನ್ನು ಗುರುವಾರ ಬಿಡುಗಡೆ ಮಾಡಲಾಗಿದೆ ಎಂಬ ಮಾಹಿತಿ ಹೊರಬಿದ್ದಿದೆ.
ಈ ಕುರಿತು ಮಾತನಾಡಿರುವ ಭಾರತೀಯ ವಿಶ್ವ ವೇದಿಕೆಯ ಅಧ್ಯಕ್ಷ ಪುನೀತ್ ಸಿಂಗ್ ಚಾಂದೋಕ್ ಸೆಪ್ಟೆಂಬರ್ 14ರಂದು ಕಾಬೂಲ್ನಲ್ಲಿ ಭಾರತೀಯ ಉದ್ಯಮಿಯಾದ ಬನ್ಸಾರಿ ಲಾಲ್ ಅರೆಂಡಾ ಅಪಹರಣಕ್ಕೆ ಒಳಗಾಗಿದ್ದರು. ಅವರನ್ನು ತಾಲಿಬಾನ್ ಈಗ ಬಿಡುಗಡೆ ಮಾಡಿದೆ ಎಂದಿದ್ದಾರೆ.
50 ವರ್ಷದವರಾದ ಅವರನ್ನು ಕಾಬೂಲ್ನಲ್ಲಿ ತಾಲಿಬಾನಿಗಳು ವಶಕ್ಕೆ ಪಡೆದಿದ್ದರು. ಈಗ ಅವರನ್ನು ಬಿಡುಗಡೆ ಮಾಡಲಾಗಿದ್ದು, ಬನ್ಸಾರಿ ಲಾಲ್ ಜೊತೆಗೆ ಅವರ ಸಹೋದರ ಅಶೋಕ್ ಲಾಲ್ ಇದ್ದಾರೆ ಎಂದು ಪುನೀತ್ ಸಿಂಗ್ ಸ್ಪಷ್ಟನೆ ನೀಡಿದ್ದಾರೆ.
ಔಷಧ ವ್ಯಾಪಾರದಲ್ಲಿ ತೊಡಗಿಕೊಂಡಿರುವ ಬನ್ಸಾರಿ ಲಾಲ್, ಅಂಗಡಿಗೆ ತೆರಳುವಾಗ ತಾಲಿಬಾನಿಗಳಿಂದ ಬಂಧಿಸಲ್ಪಟ್ಟಿದ್ದರು. ಈ ವೇಳೆ, ನವದೆಹಲಿಯಲ್ಲಿರುವ ಅವರ ಕುಟುಂಬಕ್ಕೆ ವಿಷಯ ಗೊತ್ತಾಗಿದ್ದು, ಭಾರತದ ವಿದೇಶಾಂಗ ಇಲಾಖೆಗೆ ಈ ಕುರಿತು ಮಾಹಿತಿ ನೀಡಲಾಗಿತ್ತು.
ಇದಕ್ಕೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್ ಬಗ್ಚಿ ಈ ಕುರಿತು ಸಂಬಂಧಪಟ್ಟವರೊಂದಿಗೆ ಸಂಪರ್ಕದಲ್ಲಿದ್ದೇವೆ ಎಂದಿದ್ದರು. ಈಗ ಬನ್ಸಾರಿ ಲಾಲ್ ಬಿಡುಗಡೆಯಾಗಿದ್ದು, ಮುಂದಿನ ಬೆಳವಣಿಗೆಗಳ ಬಗ್ಗೆ ತಿಳಿಸುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಇದನ್ನೂ ಓದಿ: ಡ್ರೋನ್ ದಾಳಿಯಲ್ಲಿ ಅಲ್ಖೈದಾ ಟಾಪ್ ಮೋಸ್ಟ್ ಉಗ್ರ ಹತ: ವರದಿ