ನವದೆಹಲಿ: ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರು ಭಾರತದ 50ನೇ ಮುಖ್ಯ ನ್ಯಾಯಮೂರ್ತಿಯಾಗಿ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಬೆಳಗ್ಗೆ 10:00 ಗಂಟೆಗೆ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೂತನ ಮುಖ್ಯ ನ್ಯಾಯಮೂರ್ತಿಗಳಿಗೆ ಪ್ರಮಾಣ ವಚನ ಬೋಧಿಸಲಿದ್ದಾರೆ. ನವೆಂಬರ್ 10, 2024 ರವರೆಗೆ ಇವರು ಅಧಿಕಾರಾವಧಿ ಹೊಂದಿರುತ್ತಾರೆ.
ಸುಪ್ರೀಂಕೋರ್ಟ್ ನ್ಯಾಯಾಧೀಶರು 65ನೇ ವಯಸ್ಸಿನಲ್ಲಿ ನಿವೃತ್ತರಾಗುತ್ತಾರೆ. ನ್ಯಾ.ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್‌ನ 2ನೇ ಅತ್ಯಂತ ಹಿರಿಯ ನ್ಯಾಯಾಧೀಶರಾಗಿದ್ದಾರೆ. ಅವರ ತಂದೆ ನ್ಯಾ. ವೈ.ವಿ ಚಂದ್ರಚೂಡ್ ಅವರು ಫೆಬ್ರವರಿ 2, 1978 ರಿಂದ ಜುಲೈ 11, 1985 ರವರೆಗೆ ಭಾರತದ 16 ನೇ ಮುಖ್ಯ ನ್ಯಾಯಮೂರ್ತಿಯಾಗಿದ್ದರು.
ನ್ಯಾ.ಚಂದ್ರಚೂಡ್ ವೃತ್ತಿ ಜೀವನ: ನ.11, 1959 ರಂದು ಜನಿಸಿದ ನ್ಯಾ.ಚಂದ್ರಚೂಡ್ ಅವರು ಮೇ 13, 2016 ರಂದು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಿ ನೇಮಕಗೊಂಡರು. ಅವರು ಅ.31, 2013 ರಿಂದ ಸುಪ್ರೀಂ ಕೋರ್ಟ್‌ಗೆ ನೇಮಕಗೊಳ್ಳುವವರೆಗೆ ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದರು.
- ಮಾರ್ಚ್ 29, 2000 ರಿಂದ ಅಲಹಾಬಾದ್ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಳ್ಳುವವರೆಗೆ ಬಾಂಬೆ ಹೈಕೋರ್ಟ್‌ನ ನ್ಯಾಯಾಧೀಶರಾಗಿದ್ದರು.
- 1998 ರಿಂದ ಬಾಂಬೆ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿ ನೇಮಕಗೊಳ್ಳುವವರೆಗೆ ಭಾರತದ ಹೆಚ್ಚುವರಿ ಸಾಲಿಸಿಟರ್ ಜನರಲ್ ಆಗಿ ಸೇವೆ ಸಲ್ಲಿಸಿದ್ದರು.
- ಜೂನ್ 1998ರಲ್ಲಿ ಬಾಂಬೆ ಹೈಕೋರ್ಟ್ ಅವರನ್ನು ಹಿರಿಯ ವಕೀಲರಾಗಿ ನೇಮಿಸಲಾಯಿತು.
ಯುಯು ಲಲಿತ್ ಅವರ ಉತ್ತರಾಧಿಕಾರಿ: ಜಸ್ಟಿಸ್ ಚಂದ್ರಚೂಡ್ ಅವರು ನ್ಯಾಯಮೂರ್ತಿ ಉದಯ್ ಉಮೇಶ್ ಲಲಿತ್ ಅವರ ಉತ್ತರಾಧಿಕಾರಿಯಾಗಿದ್ದಾರೆ. ಲಲಿತ್ ಅವರು ಅಕ್ಟೋಬರ್ 11 ರಂದು ಜಸ್ಟಿಸ್ ಡಿ.ವೈ ಚಂದ್ರಚೂಡ್ ಅವರ ಹೆಸರನ್ನು ಕೇಂದ್ರಕ್ಕೆ ತಮ್ಮ ಉತ್ತರಾಧಿಕಾರಿಯನ್ನಾಗಿ ಶಿಫಾರಸು ಮಾಡಿದ್ದರು. ರಾಷ್ಟ್ರಪತಿ ಮುರ್ಮು ಅವರನ್ನು ಅಕ್ಟೋಬರ್ 17 ರಂದು ಮುಂದಿನ ಸಿಜೆಐ ಆಗಿ ನೇಮಿಸಿದ್ದರು.
ಕೇಂದ್ರ ಕಾನೂನು ಸಚಿವಾಲಯವು ಇತ್ತೀಚೆಗಷ್ಟೇ ಮುಂದಿನ ಸಿಜೆಐ ನೇಮಕ ಪ್ರಕ್ರಿಯೆ ಆರಂಭಿಸಿದ್ದು, ನಿರ್ಗಮಿತ ಸಿಜೆಐಗೆ ತಮ್ಮ ಉತ್ತರಾಧಿಕಾರಿಯನ್ನು ಶಿಫಾರಸು ಮಾಡುವಂತೆ ಸೂಚಿಸಿತ್ತು. ಉನ್ನತ ನ್ಯಾಯಾಂಗದಲ್ಲಿ ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯನ್ನು ನಿಯಂತ್ರಿಸುವ ಮೆಮೊರಾಂಡಮ್ ಆಫ್ ಪ್ರೊಸೀಜರ್ (MoP) ಪ್ರಕಾರ, ಹೊರಹೋಗುವ ಸಿಜೆಐ ಅವರು ಕಾನೂನು ಸಚಿವಾಲಯದಿಂದ ಸಂವಹನವನ್ನು ಪಡೆದ ನಂತರ ಉತ್ತರಾಧಿಕಾರಿಯನ್ನು ಹೆಸರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸುತ್ತಾರೆ.
ಸುಪ್ರೀಂ ಕೋರ್ಟ್‌ನ ಅತ್ಯಂತ ಹಿರಿಯ ನ್ಯಾಯಾಧೀಶರು ಸಿಜೆಐ ಹುದ್ದೆಯನ್ನು ಹೊಂದಲು ಯೋಗ್ಯರೆಂದು ಪರಿಗಣಿಸಲಾಗಿದೆ ಮತ್ತು ನ್ಯಾಯಾಂಗದ ನಿರ್ಗಮನ ಮುಖ್ಯಸ್ಥರ ಅಭಿಪ್ರಾಯಗಳನ್ನು ಸೂಕ್ತ ಸಮಯದಲ್ಲಿ ಪಡೆಯಬೇಕು ಎಂದುಮೆಮೊರಾಂಡಮ್ ಆಫ್ ಪ್ರೊಸೀಜರ್ ಹೇಳುತ್ತದೆ.
ಇದನ್ನೂ ಓದಿ: ಡಿವೈ ಚಂದ್ರಚೂಡ್ರನ್ನು ಸುಪ್ರೀಂಗೆ ಮುಂದಿನ ಸಾರಥಿಯಾಗಿ ಹೆಸರಿಸಿದ ಸಿಜೆಐ ಯುಯು ಲಲಿತ್
ಸಂವಿಧಾನ ಮತ್ತು ಮೂಲಭೂತ ಹಕ್ಕುಗಳ ರಕ್ಷಕ: ಭಾರತದ ಸರ್ವೋಚ್ಛ ನ್ಯಾಯಾಲಯವು ಭಾರತೀಯ ನ್ಯಾಯ ವ್ಯವಸ್ಥೆಯಲ್ಲಿ ಅತೀ ಹೆಚ್ಚಿನ ಅಧಿಕಾರವುಳ್ಳ ನ್ಯಾಯಾಲಯವಾಗಿದೆ. ಭಾರತದ ಸಂವಿಧಾನದ ಪರಿಚ್ಛೇದ 5, ಮತ್ತು 4ರ ಮೂಲಕ ಈ ನ್ಯಾಯಾಲಯವನ್ನು ಸ್ಥಾಪಿಸಲಾಗಿದೆ. ಸಂವಿಧಾನ ಮತ್ತು ಮೂಲಭೂತ ಹಕ್ಕುಗಳ ರಕ್ಷಣೆ ಸರ್ವೋಚ್ಛ ನ್ಯಾಯಾಲಯದ ಮೂಲ ಉದ್ದೇಶ.