ಕೋಲ್ಕತ್ತಾ (ಪಶ್ಚಿಮ ಬಂಗಾಳ): ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್ ಮಾಧ್ಯಮದ ಮೂಲಕ ಕೋಲಾಘಾಟ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭದಲ್ಲಿ ಪಶ್ಚಿಮ ಬಂಗಾಳದಲ್ಲಿ ಅನೇಕ ಭ್ರಷ್ಟಾಚಾರ ಪ್ರಕರಣಗಳ ಕುರಿತು ಮಾತನಾಡಿದ್ದರು. ಬಳಿಕ ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ 'ಪ್ರಧಾನ ಮಂತ್ರಿಗಳ ಆರೋಪಕ್ಕೆ ಆಧಾರ ಅಥವಾ ಪುರಾವೆ ಏನು? ಎಂದು ಆಡಿಯೋ ಸಂದೇಶದ ಮೂಲಕ ತಿರುಗೇಟು ನೀಡಿದ್ದರು.
ಇದಕ್ಕೆ ಉತ್ತರಿಸಿದ ನಡ್ಡಾ "ಇನ್ನೆಷ್ಟು ಪುರಾವೆ ಬೇಕು ದೀದಿ(ಮಮತಾ ಬ್ಯಾನರ್ಜಿ)?. ಈ ರಾಜ್ಯದಲ್ಲಿ ಎಲ್ಲಾ ಪ್ರಕರಣಗಳಲ್ಲಿ ಭ್ರಷ್ಟಾಚಾರವಿದೆ. ಏನೂ ಉಳಿದಿಲ್ಲ. ಆದರೆ ಮಮತಾ ಸರ್ಕಾರ ಭ್ರಷ್ಟಾಚಾರ ನಡೆದಿಲ್ಲ ಎಂದು ಹೇಳುತ್ತಿದೆ. ಅವರೆಲ್ಲ ಈಗ ಜೈಲಿನಲ್ಲಿದ್ದಾರೆ. ತೃಣಮೂಲ ಕಾಂಗ್ರೆಸ್ನ ಮುಂದಿನ ಸಂಪುಟ ಸಭೆ ಕೂಡ ಜೈಲಿನಲ್ಲಿ ನಡೆಯಲಿದೆ. ಆದರೆ ಮಮತಾ ದೀದಿ ಪುರಾವೆ ಕೊಡಿ ಎನ್ನುತ್ತಿದ್ದಾರೆ. ನಿಮಗೆ ಯಾವ ಪುರಾವೆ ಬೇಕು?" ಪ್ರಶ್ನಿಸಿದ್ದಾರೆ.
ಶನಿವಾರ ತಡರಾತ್ರಿ ಸೈನ್ಸ್ ಸಿಟಿ ಆಡಿಟೋರಿಯಂನಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ, ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದರು. 2019ರ ವಿಧಾನಸಭಾ ಚುನಾವಣೆಯಲ್ಲಿ ನಡೆದ ಸ್ಫೋಟ ಹಾಗೂ ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣಾ ಹಿಂಸಾಚಾರವನ್ನು ಉಲ್ಲೇಖಿಸಿದ ನಡ್ಡಾ "ತೃಣಮೂಲ ಸರ್ಕಾರ ಪಶ್ಚಿಮ ಬಂಗಾಳವನ್ನು ಹೇಗೆ ಮುನ್ನಡೆಸುತ್ತಿದೆ ಎಂಬುದು ನಮಗೆ ತಿಳಿದಿದೆ. ರಾಜ್ಯದಲ್ಲಿ ಪ್ರಜಾಪ್ರಭುತ್ವ ಉಳಿದಿಲ್ಲ. ದುಃಖಕರವೆಂದರೆ ಇಲ್ಲಿ 'ಜಂಗಲ್ ರಾಜ್' ಚಾಲ್ತಿಯಲ್ಲಿದೆ" ಎಂದು ಕುಟುಕಿದರು.
"ಸ್ವಾತಂತ್ರ್ಯ ಹೋರಾಟದಲ್ಲಿ ದೇಶಕ್ಕೆ ಬಂಗಾಳ ಸಾಕಷ್ಟು ಕೊಡುಗೆ ನೀಡಿದೆ. ಆದರೆ ಇಂದು ಬಂಗಾಳ ಸಂಕಷ್ಟದಲ್ಲಿದೆ. ಪ್ರಜಾಪ್ರಭುತ್ವವನ್ನು ನಾಶಮಾಡಲಾಗುತ್ತಿದೆ. ತೃಣಮೂಲ ಕಾಂಗ್ರೆಸ್ ಬಂಗಾಳವನ್ನು ಮುಂದಕ್ಕೆ ಕೊಂಡೊಯ್ಯುತ್ತಿರುವ ರೀತಿಯನ್ನು ಹೇಳಲು ದುಃಖವಾಗುತ್ತಿದೆ. ಅದು ಕಾಡಿನ ರಾಜ್ಯವಾಗಿ ಬದಲಾಗಿದೆ ಎಂದರು. ಇದೇ ವೇಳೆ ಮೋದಿಯವರ ಆಡಳಿತವನ್ನು ಪ್ರಶಂಶಿಸಿದ ನಡ್ಡಾ 'ಸದೃಢ ಸರ್ಕಾರ, ಜನಪರ, ಬಡವರ ಪರ ಅಂದ್ರೆ ಅದು ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾತ್ರ. ಪ್ರಧಾನಿ ಮೋದಿ ನಾಯಕತ್ವ ಪ್ರಜಾಪ್ರಭುತ್ವವನ್ನು ಬಲಪಡಿಸಿದೆ. ಆದರೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಜಾಪ್ರಭುತ್ವವನ್ನು ಕೊಂದಿದ್ದಾರೆ ಎಂದು ಆರೋಪಿಸಿದರು.
ಶನಿವಾರ ಸೈನ್ಸ್ ಸಿಟಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜೆ.ಪಿ ನಡ್ಡಾ ಅವರು ಈ ಬಾರಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆದ್ದವರನ್ನು ಸನ್ಮಾನಿಸಿದರು. ಸಮಾರಂಭಕ್ಕೆ ವಿಜೇತ ಅಭ್ಯರ್ಥಿಗಳಲ್ಲದೆ, ಸುಮಾರು ಸಾವಿರ ಮಂದಿ ಸೋತ ಅಭ್ಯರ್ಥಿಗಳು ಮತ್ತು ಅವರ ಕುಟುಂಬಸ್ಥರನ್ನು ಆಹ್ವಾನಿಸಲಾಗಿತ್ತು. ಈ ವೇಳೆ ಮಾತನಾಡಿದ್ದ ನಡ್ಡಾ ಗೃಹ ಸಚಿವ ಅಮಿತ್ ಶಾ ಅವರ ಆಶಯದಂತೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಶೇ. 44ರಷ್ಟು ಮತಗಳನ್ನು ಗಳಿಸುವ ಮೂಲಕ ಕೇಸರಿ ಬ್ರಿಗೇಡ್ ಇಲ್ಲಿ 35ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದೇ ವೇಳೆ, ದೇಶದಲ್ಲಿ ಬಡತನ ನಿರ್ಮೂಲನೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಕ್ರಮಗಳನ್ನು ನಡ್ಡಾ ಶ್ಲಾಘಿಸಿದರು. "ನೀವು (ಪಿಎಂ ಮೋದಿ) ಪ್ರಾರಂಭಿಸಿದ ಯೋಜನೆಗಳು ಬಡತನವನ್ನು 22 ಪ್ರತಿಶತದಿಂದ 10 ಪ್ರತಿಶತಕ್ಕೆ ಇಳಿಸಿವೆ ಎಂದು ನಮಗೆ ತಿಳಿದಿದೆ. ಇಂದು, ಭಾರತದಲ್ಲಿ ತೀವ್ರ ಬಡತನ ಪ್ರಮಾಣ ಶೇ.1 ಕ್ಕಿಂತ ಕಡಿಮೆಯಾಗಿದೆ. ನಿಮ್ಮ ದೂರಗಾಮಿ ನೀತಿಗಳು ಬಡವರು, ವಂಚಿತರು, ಮಹಿಳೆಯರು, ದಲಿತರು ಮತ್ತು ಯುವಕರಿಗೆ ಸಹಾಯ ಮಾಡಿದೆ" ಎಂದು ನಡ್ಡಾ ಹೊಗಳಿದರು.
ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಮೂಲಕ 80 ಕೋಟಿ ನಾಗರಿಕರು ಆಹಾರ ಧಾನ್ಯಗಳನ್ನು ಪಡೆದಿದ್ದಾರೆ. ಇದು 13.5 ಕೋಟಿ ಜನರನ್ನು ಬಡತನ ಕೂಪದಿಂದ ಮೇಲೆತ್ತಿದೆ. ಜತೆಗೆ ಪಂಚಾಯತ್ ರಾಜ್ ವ್ಯವಸ್ಥೆಯ ಪ್ರಾಮುಖ್ಯತೆಯನ್ನು ಹೆಚ್ಚಿಸುತ್ತದೆ. ಜಿಲ್ಲಾ ಪರಿಷತ್ತಿನ ಚುನಾಯಿತ ಪ್ರತಿನಿಧಿಗಳ ಜವಾಬ್ದಾರಿಯನ್ನೂ ಹೆಚ್ಚಿಸುತ್ತದೆ. ಏಕೆಂದರೆ ಈ ಯೋಜನೆಗಳ ಮೂಲಕ ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಪ್ರಯೋಜನ ಪಡೆಯುವುದನ್ನು ದೃಢಪಡಿಸಿದೆ ಎಂದು ನಡ್ಡಾ ಹೇಳಿದರು.
ಇದನ್ನೂ ಓದಿ: ಮಣಿಪುರಕ್ಕೆ ಭೇಟಿ ನೀಡುವ ಬದಲು ವಿದೇಶಕ್ಕೆ ಹೋಗಿ ವರ್ಚಸ್ಸು ಹೆಚ್ಚಿಸಿಕೊಳ್ತಿದ್ದಾರೆ: ಮೋದಿ ವಿರುದ್ದ ಮಮತಾ ಆಕ್ರೋಶ