ನವದೆಹಲಿ: ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆ- 2019 (Personal Data Protection Bill, 2019) ಕುರಿತು ಚರ್ಚಿಸಲು ಬಿಜೆಪಿ ಸಂಸದ ಪಿಪಿ ಚೌಧರಿ ಅವರ ನೇತೃತ್ವದಲ್ಲಿ ಜಂಟಿ ಸಂಸದೀಯ ಸಮಿತಿಯು (Joint Parliamentary Committee) ದೆಹಲಿಯಲ್ಲಿಂದು ಸಭೆ ಸೇರಿದೆ.
ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆ(2019)ಯ ಕರಡು ವರದಿಯ ಪರಿಗಣನೆ ಮತ್ತು ಅಳವಡಿಕೆ ಸಭೆಯ ಕಾರ್ಯಸೂಚಿಯಲ್ಲಿದೆ. ಕೇಂದ್ರ ಸಚಿವ ಸಂಪುಟವು 2019ರ ಡಿಸೆಂಬರ್‌ನಲ್ಲಿ ಭಾರತೀಯ ನಾಗರಿಕರ ಗೌಪ್ಯತೆ ಮತ್ತು ಡೇಟಾ ಸುರಕ್ಷತೆಯೊಂದಿಗೆ ವ್ಯವಹರಿಸುವ ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆ-2019 ಜಾರಿಗೆ ಅನುಮೋದನೆ ನೀಡಿತ್ತು.
2017ರಲ್ಲಿ ಗೌಪ್ಯತೆ ಮೂಲ ಹಕ್ಕು ಎಂದು ಸುಪ್ರೀಂಕೋರ್ಟ್ ತೀರ್ಪಿನ ನಂತರ ಮಸೂದೆಯನ್ನು ರಚಿಸಲಾಗಿದೆ. ಮಸೂದೆಯ ಕರಡು ವರದಿಯನ್ನು ಪರಿಗಣಿಸಲು ಹಾಗೂ ಅಂಗೀಕರಿಸಲು ಸಂಸತ್ತಿನ ಜಂಟಿ ಸಮಿತಿಯು ನ. 12 ರಂದು ದೆಹಲಿಯಲ್ಲಿ ಸಭೆ ನಡೆಸಿತ್ತು. 2019ರ ಡಿಸೆಂಬರ್ 11 ರಂದು ಲೋಕಸಭೆಯಲ್ಲಿ ಮಂಡಿಸಲಾದ 'ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆ-2019' ಅನ್ನು ಪರಿಶೀಲಿಸಲು ಜಂಟಿ ಸಮಿತಿ ರಚಿಸಲಾಗಿದೆ.
ವೈಯಕ್ತಿಕ ಡೇಟಾಗೆ ಸಂಬಂಧಿಸಿದ ವ್ಯಕ್ತಿಗಳ ಗೌಪ್ಯತೆಯ ರಕ್ಷಣೆ, ವೈಯಕ್ತಿಕ ಡೇಟಾದ ಹರಿವು ಮತ್ತು ಬಳಕೆ ನಿರ್ದಿಷ್ಟಪಡಿಸುವುದು, ವೈಯಕ್ತಿಕ ಡೇಟಾ ಪ್ರಕ್ರಿಯೆಗೊಳಿಸುವ ವ್ಯಕ್ತಿಗಳು ಮತ್ತು ಘಟಕಗಳ ನಡುವೆ ನಂಬಿಕೆಯ ಸಂಬಂಧವನ್ನು ಸೃಷ್ಟಿಸುವುದು, ವೈಯಕ್ತಿಕ ಡೇಟಾ ಹೊಂದಿರುವ ವ್ಯಕ್ತಿಗಳ ಹಕ್ಕುಗಳನ್ನು ರಕ್ಷಿಸುವುದು ಈ ಮಸೂದೆಯ ಗುರಿಯಾಗಿದೆ.
ಡೇಟಾ ಸಂಸ್ಕರಣೆಯಲ್ಲಿ ಸಾಂಸ್ಥಿಕ ಮತ್ತು ತಾಂತ್ರಿಕ ಕ್ರಮಗಳಿಗಾಗಿ ಚೌಕಟ್ಟನ್ನು ರಚಿಸಲು, ಸಾಮಾಜಿಕ ಮಾಧ್ಯಮ ಮಧ್ಯವರ್ತಿ, ಗಡಿಯಾಚೆಗಿನ ವರ್ಗಾವಣೆ, ವೈಯಕ್ತಿಕ ಡೇಟಾವನ್ನು ಸಂಸ್ಕರಿಸುವ ಘಟಕಗಳ ಹೊಣೆಗಾರಿಕೆ, ಅನಧಿಕೃತ ಮತ್ತು ಹಾನಿಕಾರಕ ಪ್ರಕ್ರಿಯೆಗೆ ಪರಿಹಾರಗಳು ಮತ್ತು ಡೇಟಾವನ್ನು ಸ್ಥಾಪಿಸಲು ಮಾನದಂಡಗಳನ್ನು ಭಾರತದ ರಕ್ಷಣಾ ಪ್ರಾಧಿಕಾರ ರೂಪಿಸಲಿದೆ.