ಶ್ರೀನಗರ: ಕಾರಾಗೃಹದ ಮಹಾನಿರ್ದೇಶಕಾರದ ಹೇಮಂತ್ ಕುಮಾರ್ ಲೋಹಿಯಾ ಅವರು ಜಮ್ಮು ನಗರದ ಹೊರವಲಯದಲ್ಲಿರುವ ಮನೆಯೊಂದರಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಪೊಲೀಸರು ಇದು ಕೊಲೆಯಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಜಮ್ಮು ವಲಯದ ಎಡಿಜಿಪಿ ಮುಖೇಶ್ ಸಿಂಗ್ ಮಾತನಾಡಿ, 'ಕಾರಾಗೃಹದ ಡಿಜಿ ಹೇಮಂತ್ ಲೋಹಿಯಾ ಅವರ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾಗಿದೆ. ಮೇಲ್ನೋಟಕ್ಕೆ ಇದು ಕೊಲೆ ರೀತಿ ಕಾಣುತ್ತದೆ. ಲೋಹಿಯಾ ಅವರ ಮನೆಯ ಕೆಲಸಗಾರ ತಲೆಮರೆಸಿಕೊಂಡಿದ್ದು, ಪೊಲೀಸರು ಆತನಿಗಾಗಿ ಹುಡುಕಾಟ ಆರಂಭಿಸಿದ್ದಾರೆ ಎಂದರು.
ಈ ನಡುವೆ ಫೋರೆನ್ಸಿಕ್ ಮತ್ತು ಅಪರಾಧ ತಂಡಗಳು ತನಿಖೆಗಾಗಿ ಸ್ಥಳಕ್ಕೆ ಧಾವಿಸಿವೆ. ತನಿಖಾ ಪ್ರಕ್ರಿಯೆ ಪ್ರಾರಂಭವಾಗಿದೆ ಮತ್ತು ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ ಎಂದು ಮುಖೇಶ್ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ: ರೈಫಲ್ ಕಳ್ಳತನ ಆರೋಪಿ ಪೊಲೀಸರಿಗೆ ಶರಣು.. ಏನಿದು ಘಟನೆ?
ಲೋಹಿಯಾ ಅವರ ಮೃತದೇಹವನ್ನು ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ (ಜಿಎಂಸಿ&ಎಚ್)ನ ಶವಾಗಾರ ಕೊಠಡಿಯಲ್ಲಿ ಇಡಲಾಗಿದೆ. ಅವರ ಮರಣೋತ್ತರ ಪರೀಕ್ಷೆಯನ್ನು ವೈದ್ಯರ ಮಂಡಳಿಯು ನಡೆಸಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಲೋಹಿಯಾ ಅವರು ತಮ್ಮ ಹಳೆಯ ಸ್ನೇಹಿತ ರಾಜೀವ್ ಖಜುರಿಯಾ ಅವರ ಮನೆಗೆ ಹೋಗಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಲೋಹಿಯಾ ಅವರು ಖಜುರಿಯಾ ರಜೌರಿ ಜಿಲ್ಲೆಯವರು ಎಂದು ತಿಳಿದುಬಂದಿದೆ.