ಶ್ರೀನಗರ, ಜಮ್ಮು ಕಾಶ್ಮೀರ: ಅಪರಿಚಿತ ಬಂದೂಕುಧಾರಿಗಳು ಜಮ್ಮು ಕಾಶ್ಮೀರದ ಗ್ರಾಮೀಣ ಬ್ಯಾಂಕ್ ಮೇಲೆ ದಾಳಿ ನಡೆಸಿ, ಲಕ್ಷಾಂತರ ರೂಪಾಯಿ ನಗದು ದೋಚಿರುವ ಘಟನೆ ಬಾರಾಮುಲ್ಲಾ ಜಿಲ್ಲೆಯಲ್ಲಿ ನಡೆದಿದೆ.
ಶುಕ್ರವಾರ ಮಧ್ಯಾಹ್ನದ ವೇಳೆಗೆ ತಂಗ್ಮಾರ್ಗ್ ಪ್ರದೇಶದ ಕುಂಝರ್ ಬ್ರಾಂಚ್ಗೆ ನುಗ್ಗಿದ ಪಿಸ್ತೂಲ್ ಹಿಡಿದಿದ್ದ ಅಪರಿಚಿತ ದುಷ್ಕರ್ಮಿಗಳ ತಂಡ ಕೆಲವು ಸುತ್ತು ಗುಂಡುಗಳನ್ನು ಗಾಳಿಯಲ್ಲಿ ಹಾರಿಸಿ, ನಗದು ದೋಚಿ, ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ವಿಧಾನಸಭೆಯಲ್ಲೇ ಸ್ಯಾನಿಟೈಸರ್ ಸೇವಿಸಿ ಬಿಜೆಪಿ ಶಾಸಕನಿಂದ ಆತ್ಮಹತ್ಯೆ ಯತ್ನ
ದುಷ್ಕರ್ಮಿಗಳು ಬ್ಯಾಂಕ್ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಬಹುಪಾಲು ಬ್ಯಾಂಕ್ ಸಿಬ್ಬಂದಿ ಪ್ರಾರ್ಥನೆಗೆ ತೆರಳಿದ್ದರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಸುಮಾರು 2.25 ಲಕ್ಷ ರೂಪಾಯಿ ದೋಚಲಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಭದ್ರತಾ ಸಿಬ್ಬಂದಿಯೂ ಕೂಡಾ ಬ್ಯಾಂಕ್ ನಲ್ಲಿ ಹಾಜರಿರಲಿಲ್ಲ. ಸಿಸಿಟಿವಿಯನ್ನೂ ಅಳವಡಿಸಿರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.