ಶ್ರೀನಗರ: ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಜಮ್ಮು ಮತ್ತು ಕಾಶ್ಮೀರ ಆಡಳಿತವು ಭಯೋತ್ಪಾದನೆ ವಿರುದ್ಧ ನಿರ್ಣಾಯಕ ಪ್ರಾಬಲ್ಯ ಸ್ಥಾಪಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರ ನೇತೃತ್ವದಲ್ಲಿ, ಜಮ್ಮು ಮತ್ತು ಕಾಶ್ಮೀರವು ಶಾಂತಿ ಮತ್ತು ಅಭಿವೃದ್ಧಿಯ ಹಾದಿಯಲ್ಲಿದೆ. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಭಯೋತ್ಪಾದನೆಯ ಮೇಲೆ ಸಿನ್ಹಾ ಅವರು ನಿರ್ಣಾಯಕ ಪ್ರಾಬಲ್ಯವನ್ನು ಸ್ಥಾಪಿಸಿದ್ದಾರೆ ಎಂದು ಶಾ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಇಲ್ಲಿ ನಡೆದ ಸಮಾರಂಭವನ್ನು ಉದ್ದೇಶಿಸಿ ಹೇಳಿದರು.
ಸೋನಾವರ್‌ನಲ್ಲಿ ದಾರ್ಶನಿಕ ಮತ್ತು ಸಮಾಜ ಸುಧಾರಕ ರಾಮಾನುಜಾಚಾರ್ಯರ ‘ಶಾಂತಿಯ ಪ್ರತಿಮೆ’ಯನ್ನು ಅನಾವರಣಗೊಳಿಸಿದ ನಂತರ ಗೃಹ ಸಚಿವರು ಈ ರೀತಿ ಹೇಳಿಕೆ ನೀಡಿದ್ದಾರೆ. ಸಿನ್ಹಾ ನೇತೃತ್ವದ ಆಡಳಿತವು ಯಾವುದೇ ತಾರತಮ್ಯವಿಲ್ಲದೆ ಕಾಶ್ಮೀರದ ಜನರಿಗೆ ಅಭಿವೃದ್ಧಿಯನ್ನು ತಲುಪಿಸಿದೆ ಎಂದು ಶಾ ಇದೇ ವೇಳೆ ಗುಣಗಾನ ಮಾಡಿದರು.
370 ಮತ್ತು 35ಎ ವಿಧಿಗಳನ್ನು ತೆಗೆದುಹಾಕುವ ಮೂಲಕ ಜಮ್ಮು ಮತ್ತು ಕಾಶ್ಮೀರವನ್ನು ರಾಷ್ಟ್ರದೊಂದಿಗೆ ವಿಲೀನಗೊಳಿಸಿಕೊಳ್ಳಲಾಗಿದೆ. ಎಲ್ಲರ ಭರವಸೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಈಡೇರಿಸಿದ್ದಾರೆ. 5 ಆಗಸ್ಟ್ 2019 ರಂದು ಕಾಶ್ಮೀರದಲ್ಲಿ ಹೊಸ ಯುಗವನ್ನು ಸ್ಥಾಪಿಸಲಾಯಿತು ಎಂದು ಹೊಗಳಿದ ಅವರು, ಶ್ರೀನಗರದಲ್ಲಿರುವ ಸೂರ್ಯ ದೇವಾಲಯವನ್ನು ಪುನಃಸ್ಥಾಪಿಸಲಾಗಿದೆ ಎಂದು ಶಾ ತಿಳಿಸಿದರು.
ಇದನ್ನೂ ಓದಿ: ನೂಪುರ್ ಶರ್ಮಾ ತಲೆ ಕಡಿಯುತ್ತೇನೆ ಎಂದಿದ್ದ ಆರೋಪಿ ಬಂಧನ