ರಾಂಚಿ (ಜಾರ್ಖಂಡ್): ಆಹಾರ ವಿತರಣೆ ಅಥವಾ ಫುಡ್ ಡೆಲಿವರಿ ಬಾಯ್ ಆಗಿ ಕೆಲಸ ಮಾಡುವವರು ಅಥವಾ ಇದೇ ರೀತಿಯ ಇತರ ಕೆಲಸಗಳನ್ನು ಮಾಡುವವರಿಗೆ ಕನಿಷ್ಠ ವೇತನ ಕಾನೂನು ರೂಪಿಸಲು ಜಾರ್ಖಂಡ್ ಸರ್ಕಾರ ಸಿದ್ಧತೆ ನಡೆಸಿದೆ. ಇದಕ್ಕಾಗಿ ರಾಜ್ಯ ಕಾರ್ಮಿಕ ಇಲಾಖೆ ಸಮಿತಿಯೊಂದನ್ನು ರಚಿಸಿದೆ. ಸ್ವಿಗ್ಗಿ, ಜೊಮಾಟೊ, ಓಲಾ, ಉಬರ್, ರ‍್ಯಾಪಿಡೊದಂತಹ ಕಂಪನಿಗಳಿಗೆ ಗುತ್ತಿಗೆ ಅಥವಾ ಕಮಿಷನ್ ಮೇಲೆ ಕೆಲಸ ಮಾಡುವ ಜನರನ್ನು ಕನಿಷ್ಠ ವೇತನದ ವ್ಯಾಪ್ತಿಗೆ ತರುವ ನಿಟ್ಟಿನಲ್ಲಿ ಕ್ರಮ ಕೈಗೊಂಡ ಮೊದಲ ರಾಜ್ಯವಾಗಲಿದೆ ಜಾರ್ಖಂಡ್. ದೇಶದ ಬೇರೆ ಯಾವುದೇ ರಾಜ್ಯ ಸರ್ಕಾರವು ಇಲ್ಲಿಯವರೆಗೆ ಇಂತಹ ಉಪಕ್ರಮವನ್ನು ಕೈಗೊಂಡಿಲ್ಲ.
ಕಾರ್ಮಿಕ ಆಯುಕ್ತ ಸಂಜೀವ್ ಕುಮಾರ್ ಬೆಸ್ರಾ, ಕನಿಷ್ಠ ವೇತನ ಮಂಡಳಿ ನಿರ್ದೇಶಕ ರಾಜೇಶ್ ಪ್ರಸಾದ್, ಫೆಡರೇಶನ್ ಆಫ್ ಜಾರ್ಖಂಡ್ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಅಧ್ಯಕ್ಷ ಕಿಶೋರ್ ಮಂತ್ರಿ, ಜಾರ್ಖಂಡ್ ಇಂಟಕ್ ಅಧ್ಯಕ್ಷ ರಾಕೇಶ್ವರ್ ಪಾಂಡೆ ಮತ್ತು ಸಿಐಟಿಯು, ಬಿಎಂಎಸ್ ಮತ್ತು ಎಐಟಿಯುಸಿ ಕಾರ್ಮಿಕ ಸಂಘಗಳ ಪ್ರತಿನಿಧಿಗಳನ್ನು ರಾಜ್ಯ ಕಾರ್ಮಿಕ ಇಲಾಖೆ ಅಡಿ ಜಾರ್ಖಂಡ್ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ರಚಿಸಿದ ಸಮಿತಿಯಲ್ಲಿ ಸೇರಿಸಲಾಗಿದೆ.
ಈ ಸಮಿತಿಯು ಸ್ವಿಗ್ಗಿ-ಜೊಮಾಟೊ, ಓಲಾ-ಉಬರ್ ಚಾಲಕರು, ಗಿಗ್ ಕಾರ್ಮಿಕರು, ಆನ್ಲೈನ್ ಡೆಲಿವರಿ ಬಾಯ್ಗಳು ಕೆಲಸ ಮಾಡುವ ಪರಿಸ್ಥಿತಿಗಳನ್ನು ಅಧ್ಯಯನ ಮಾಡಲಿದೆ. ಈ ಆಧಾರದ ಮೇಲೆ, ಅವರ ಕನಿಷ್ಠ ವೇತನದ ಬಗ್ಗೆ ಶಿಫಾರಸುಗಳನ್ನು ಮಾಡಲಾಗುವುದು. ಜಾರ್ಖಂಡ್ನ ವಿವಿಧ ಜಿಲ್ಲೆಗಳಲ್ಲಿ ಸುಮಾರು 12 ಲಕ್ಷ ಜನ ಇಂಥ ಕೆಲಸದಲ್ಲಿ ತೊಡಗಿದ್ದಾರೆ ಎಂದು ಅಂದಾಜಿಸಲಾಗಿದೆ.
ಈ ಹಿಂದೆ, ಜಾರ್ಖಂಡ್ ಸರ್ಕಾರವು ರಾಜ್ಯದ ಎಲ್ಲ ಖಾಸಗಿ ಕಂಪನಿಗಳಲ್ಲಿ ಶೇಕಡಾ 75 ರಷ್ಟು ಹುದ್ದೆಗಳನ್ನು ಸ್ಥಳೀಯ ಜನರಿಗೆ ಮಾಸಿಕ 40,000 ರೂ.ಗಳವರೆಗೆ ವೇತನದೊಂದಿಗೆ ಕಾಯ್ದಿರಿಸಲು ಕಾನೂನು ಜಾರಿ ಮಾಡಿತ್ತು. ಈ ನಿಯಮ ಪಾಲಿಸದ ನೂರಾರು ಕಂಪನಿಗಳ ವಿರುದ್ಧ ಕ್ರಮ ಕೂಡ ಕೈಗೊಳ್ಳಲಾಗಿದೆ.
ಈಗ, ರಾಜ್ಯದ ವಿವಿಧ ಕೈಗಾರಿಕಾ - ವ್ಯಾಪಾರ ಸಂಸ್ಥೆಗಳು ಅಥವಾ ಖಾಸಗಿ - ಸರ್ಕಾರಿ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುವ ಕಾರ್ಮಿಕರ ಕನಿಷ್ಠ ವೇತನವನ್ನು ಸಹ ಪರಿಶೀಲಿಸಲಾಗುತ್ತಿದೆ. ಅವರ ಕೆಲಸದ ಪ್ರದೇಶಗಳು ಮತ್ತು ಕೆಲಸದ ಸ್ವರೂಪದ ಆಧಾರದ ಮೇಲೆ ಅವರನ್ನು ವಿವಿಧ ವರ್ಗಗಳಾಗಿ ವಿಂಗಡಿಸುವ ಮೂಲಕ ಅವರ ಕನಿಷ್ಠ ವೇತನವನ್ನು ಹೆಚ್ಚಿಸಲು ಶಿಫಾರಸು ಮಾಡಲಾಗುತ್ತದೆ.
ಡೆಲಿವರಿ ಉದ್ಯೋಗಿಗಳಿಗೆ ಕನಿಷ್ಠ ವೇತನ ನೀತಿ ಜಾರಿಗೊಳಿಸುವ ನಿಟ್ಟಿನಲ್ಲಿ ರಾಜ್ಯದ ನಗರಗಳನ್ನು ಮೂರು ವಿಭಾಗಗಳಾಗಿ ವಿಂಗಡಿಸಲು ಸಿದ್ಧತೆಗಳು ನಡೆಯುತ್ತಿವೆ. ರಾಂಚಿ, ಜೆಮ್ಶಡ್ಪುರ , ಧನಬಾದ್, ಬೊಕಾರೊ ಸೇರಿದಂತೆ ದೊಡ್ಡ ನಗರಗಳಲ್ಲಿ ಕೆಲಸ ಮಾಡುವ ನೌಕರರನ್ನು 'ಎ' ವರ್ಗದಲ್ಲಿ, ಮಹಾನಗರ ಪಾಲಿಕೆಗಳು, ಪುರಸಭೆಗಳು ಮತ್ತು ಪುರಸಭೆ ವಲಯಗಳಲ್ಲಿ ಕೆಲಸ ಮಾಡುವ ನೌಕರರನ್ನು 'ಬಿ' ವರ್ಗಕ್ಕೆ ಮತ್ತು ಗ್ರಾಮೀಣ ಮತ್ತು ದೂರದ ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುವ ನೌಕರರನ್ನು 'ಸಿ' ವರ್ಗಕ್ಕೆ ಸೇರಿಸಲಾಗುವುದು. ಈ ಮಾನದಂಡಗಳ ಆಧಾರದ ಮೇಲೆ ಕನಿಷ್ಠ ವೇತನವನ್ನು ನಿರ್ಧರಿಸಲಾಗುತ್ತದೆ.
ಇದನ್ನೂ ಓದಿ : ಉದ್ಯೋಗಕ್ಕಾಗಿ ಲಂಚ: 16 ನೌಕರರನ್ನು ವಜಾಗೊಳಿಸಿದ ಟಿಸಿಎಸ್