ರಾಯಪುರ/ರಾಂಚಿ: ಪ್ರತಿಪಕ್ಷದ ಬಿಜೆಪಿಯಿಂದ ಶಾಸಕರ ಕುದುರೆ ವ್ಯಾಪಾರ ಭೀತಿಯಿಂದ ಛತ್ತೀಸ್‌ಗಢದ ರಾಯಪುರದ ರೆಸಾರ್ಟ್‌ಗೆ ಸ್ಥಳಾಂತರಗೊಂಡಿದ್ದ ಜಾರ್ಖಂಡ್ನ ಆಡಳಿತಾರೂಢ ಸಮ್ಮಿಶ್ರ ಸರ್ಕಾರದ ಶಾಸಕರು ಇಂದು ವಿಮಾನದಲ್ಲಿ ರಾಜಧಾನಿ ರಾಂಚಿಗೆ ಮರಳಿದ್ದಾರೆ. ಇತ್ತ, ಮುಖ್ಯಮಂತ್ರಿ ಹೇಮಂತ್ ಸೋರೆನ್ ತಮ್ಮ ಸರ್ಕಾರದ ಅಸ್ಥಿತ್ವವನ್ನು ಖಾತ್ರಿ ಪಡಿಸಲು ಸೋಮವಾರ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ವಿಶ್ವಾಸಮತಯಾಚಿಸಲಿದ್ದಾರೆ.
ಸರ್ಕಾರವನ್ನು ಉರುಳಿಸಲು ಪ್ರತಿಪಕ್ಷ ಬಿಜೆಪಿ ಶಾಸಕರ ಖರೀದಿಗೆ ಯತ್ನಿಸುತ್ತಿದೆ ಎಂಬ ಆತಂತಕದಿಂದ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಹಾಗೂ ಕಾಂಗ್ರೆಸ್ ನೇತೃತ್ವದ ಯುಪಿಎ ಮೈತ್ರಿಕೂಟವು ತನ್ನ ಶಾಸಕರನ್ನು ರಾಜ್ಯದಿಂದ ಸ್ಥಳಾಂತರ ಮಾಡಿತ್ತು. ತನ್ನ ಎಲ್ಲ ಶಾಸಕರನ್ನು ರಾಯಪುರ ಸಮೀಪದ ಐಷಾರಾಮಿ ರೆಸಾರ್ಟ್‌ಗೆ ಸ್ಥಳಾಂತರಿಸಲಾಗಿತ್ತು. ಆಗಸ್ಟ್ 30ರಿಂದಲೂ ರೆಸಾರ್ಟ್‌ನಲ್ಲಿ ಶಾಸಕರು ಬೀಡು ಬಿಟ್ಟಿದ್ದರು.
ಇಂದು ಸುಮಾರು 30 ಶಾಸಕರು ರಾಯಪುರದಂದ ರಾಜಧಾನಿ ರಾಂಚಿಗೆ ಮರಳಿದ್ದು, ಶಾಸಕರಿದ್ದ ವಿಮಾನವು ಸಂಜೆ 6 ಗಂಟೆ ಸುಮಾರಿಗೆ ರಾಂಚಿ ವಿಮಾನ ನಿಲ್ದಾಣಕ್ಕೆ ಬಂದಿಳಿದಿದೆ. ವಿಮಾನ ನಿಲ್ದಾಣದಿಂದ ಎರಡು ಬಸ್‌ಗಳಲ್ಲಿ ಕರೆತಂದು ರಾಂಚಿಯ ಜೈಲ್ ಚೌಕ್ ಪ್ರದೇಶದ ಬಳಿ ಇರುವ ಸರ್ಕ್ಯೂಟ್ ಹೌಸ್‌ಗೆ ಶಾಸಕರನ್ನು ಸ್ಥಳಾಂತರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಾರ್ಖಂಡ್‌ನಲ್ಲಿ ಜೆಎಂಎಂ, ಕಾಂಗ್ರೆಸ್ ಹಾಗೂ ಆರ್ಜೆಡಿ ಪಕ್ಷಗಳ ಮೈತ್ರಿಕೂಟದ ಯುಪಿಎ ಸರ್ಕಾರ ಅಧಿಕಾರದಲ್ಲಿದೆ. 81 ಸದಸ್ಯ ಬಲದ ವಿಧಾನಸಭೆಯಲ್ಲಿ ಜೆಎಂಎಂನ 30 ಶಾಸಕರು, ಕಾಂಗ್ರೆಸ್ನ 18 ಮತ್ತು ಆರ್ಜೆಡಿಯ ಒಬ್ಬ ಶಾಸಕರು ಹಾಗೂ ಪ್ರತಿಪಕ್ಷ ಬಿಜೆಪಿಯ 26 ಶಾಸಕರಿದ್ದಾರೆ.
ಇದನ್ನೂ ಓದಿ: ಜಾರ್ಖಂಡ್‌ನಲ್ಲಿ ರಾಜಕೀಯ ಬಿಕ್ಕಟ್ಟು: ಸರ್ಕಾರಕ್ಕೆ ಇಕ್ಕಟ್ಟು, ಸಿಎಂ ನೇತೃತ್ವದಲ್ಲಿ ಶಾಸಕರು ಶಿಫ್ಟ್